ಜಿಲ್ಲೆ

ಶಿಕ್ಷಣ ವ್ಯಾಪಾರೀಕರಣ: ಡಾ.ಟಿ.ಎಸ್.ನಾಗಾಭರಣ

ಮೈಸೂರು: ಶಿಕ್ಷಣ ವ್ಯಾಪಾರೀಕರಣಗೊಂಡಿದೆ. ಸೇವಾ ಮನೋಭಾವವಿಲ್ಲದ ಬದುಕು ಸಮಾಜದ ಅಳಿವಿಗೆ ಕಾರಣವಾಗುತ್ತದೆ ಎಂದು ಚಲನಚಿತ್ರ ನಿರ್ದೇಶಕ, ರಂಗಕರ್ಮಿ ಡಾ. ಟಿ.ಎಸ್. ನಾಗಾಭರಣ ಕಳವಳ ವ್ಯಕ್ತಪಡಿಸಿದರು.

ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಡಾ. ಅಬ್ದುಲ್ ಕಲಾಂ ರಜತ ಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಸತ್ ಮತ್ತು ಪ್ರತಿಭಾ ವೇದಿಕೆ ಉದ್ಘಾಟಿಸಿ ಮಾತನಾಡಿದರು.

ಸೇವಾ ಮನೋಭಾವವಿರುವ ಶಿಕ್ಷಣ ನೀಡುವುದೇ ನಿಜವಾದ ಶಿಕ್ಷಣ. ಒಂದು ಗುರಿಯ ಹಿಂದೆ ಖಂಡಿತ ಒಬ್ಬರು ಗುರು ಇದ್ದೇ ಇರುತ್ತಾರೆ. ಪ್ರತಿಭೆ ಇರುವವರೆಲ್ಲರೂ ಮತ್ತೊಬ್ಬರಿಗೆ ಮಾದರಿಯಾಗುತ್ತಾರೆ.

ಪ್ರತಿಭೆ ಕಂಡುಕೊಳ್ಳುವ ಮತ್ತು ಅದನ್ನು ಬೆಳೆಸಿಕೊಳ್ಳುವ ಕೆಲಸ ಮಾಡಬೇಕು. ಹೊಸ ಮಾದರಿ ಹುಡುಕುತ್ತಾ, ನಮ್ಮತನ ಕಂಡುಕೊಳ್ಳುತ್ತಾ, ಸಾಂಸ್ಕೃತಿಕವಾಗಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು

ಭಾರತೀಯ ಚಲನಚಿತ್ರರಂಗದಲ್ಲಿ ಕವಿಗಳ ಕವನ ಆಧರಿಸಿ ಚಿತ್ರ ಮಾಡಿದ ಹೆಮ್ಮೆ ನನಗಿದೆ. ಅದಕ್ಕೆ ನಿದರ್ಶನ ಕೆ.ಎಸ್. ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆ ಕವನ ಸಂಕಲ ಆಧರಿಸಿ ಮೈಸೂರು ಮಲ್ಲಿಗೆ ಚಲನಚಿತ್ರ ವಿಶಿಷ್ಟವಾಗಿದೆ. ಇದು ನನ್ನ ಮತ್ತು ಕನ್ನಡದ ಮಾದರಿ. ನಮ್ಮತನವೆಂದರೆ ನಮ್ಮ ಭಾಷೆ, ನಮ್ಮ ನೆಲ ಎಲ್ಲವನ್ನೂ ಗೌರವಿಸುವುದು, ಬಳಸುವುದು. ಈ ಮೂಲಕ ನಮ್ಮ ಮಾದರಿ ಹುಟ್ಟಿ ಹಾಕಬೇಕು ಎಂದು ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿರುವ ಪ್ರತಿಭೆ ಸಕಾಲದಲ್ಲಿ ಗುರುತಿಸಿಕೊಂಡು ಅದನ್ನು ಪ್ರವೃತ್ತಿಯಾಗಿ ಬೆಳೆಸಿಕೊಳ್ಳಬೇಕು. ವೃತ್ತಿಗೆ ನಿವೃತ್ತಿ ಇದೆ. ಆದರೆ, ಪ್ರವೃತ್ತಿ ಸಾಯುವವವರೆಗೂ ಇರುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿ ಸಂಸತ್ ಕುರಿತು ಮಾತನಾಡಿದ ಅವರು, ಸಂಸತ್ ಎಂಬುದು ಈಗಿನ ವಿಚಾರವಲ್ಲ. 12ನೇ ಶತಮಾನದ ಶರಣರ ಅನುಭವ ಮಂಟಪದಲ್ಲೇ ಸಂಸತ್ ಆರಂಭವಾಗಿತ್ತು.

ಸಂಸತ್ ನಾಯಕತ್ವಕ್ಕಾಗಿ ಮಾತ್ರವಲ್ಲದೇ ಸೇವಾ ಮನೋಭಾವ ಒಳಗೊಂಡಿರಬೇಕು. ಹಾಗೇ ನೋಡುವಾಗ ಅನುಭವ ಮಂಟಪ ಮತ್ತು ವಚನಕಾರರು ನಿಜವಾದ ಸಂಸತ್ ಅರ್ಥದಲ್ಲಿ ಕೆಲಸ ಮಾಡಿದ್ದರು. ಶರಣರ ಕಾಯಕ ಮತ್ತು ದಾಸೋಹ ಇಂದಿನ ಮಾದರಿಯಾಗಬೇಕು. ಸಂಸತ್‌ನಿಂದ ಮಕ್ಕಳು ಉಜ್ವಲವಾಗಿ ತಾವು ಬೆಳೆದು, ಅದನ್ನು ಬೆಳೆಸಬೇಕು ಎಂದರು.

ಸತ್ಯ ಪರಿಶೋಧಿಸುವ ಕೆಲಸ ರಂಗಭೂಮಿ ಮಾಡುತ್ತದೆ. ಎಂದಿಗೂ ಸಾಧನೆ ಟೀಕಿಸುವ ಮೊದಲು ಅದರ ಹಿಂದಿನ ಪರಿಶ್ರಮ ಗಮನಿಸಬೇಕು. ನಟನಾಗುವುದು ಸುಲಭದ ಕೆಲಸವಲ್ಲ. ನಾವು ಕನ್ನಡಿಗರು ಯಾರಿಗೂ, ಎಲ್ಲಿಗೂ ಯಾವುದಕ್ಕೂ ಕಡಿಮೆ ಇಲ್ಲ. ಈ ಬಗ್ಗೆ ನಮ್ಮೆಲ್ಲರಿಗೂ ಗರ್ವ ಇರಬೇಕು. ವೈಜ್ಞಾನಿಕವಾಗಿ ಯಾವುದಾದರೂ ಭಾಷೆ ಇದ್ದರೆ ಅದು ಕನ್ನಡ ಮಾತ್ರ ಎಂದರು.

ಮಹಾಜನ ವಿದ್ಯಾಸಂಸ್ಥೆ ಗೌ. ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್ ಮಾತನಾಡಿ, ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು, ನಿಮ್ಮಲ್ಲಿರುವ ನ್ಯೂನತೆ ಸರಿಪಡಿಸಿಕೊಂಡು, ಛಲದಿಂದ ಮುನ್ನುಗ್ಗಿ, ಸಾಮಾನ್ಯ ಜ್ಞಾನದ ಜತೆಗೆ ನಿಮ್ಮ ಕೌಶಲ ಕಡೆಗೆ ಗಮನಹರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿ ಸಂಸತ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸತ್‌ನ ಬ್ಯಾಡ್ಜ್ ನೀಡಿ ಗೌರವಿಸಲಾಯಿತು. ಪ್ರಾಂಶುಪಾಲೆ ಡಾ. ಬಿ.ಆರ್. ಜಯಕುಮಾರಿ, ವಿದ್ಯಾರ್ಥಿ ಸಂಸತ್ ಸಂಚಾಲಕಿ ಡಾ.ಪಿ.ಜಿ. ಪುಷ್ಪಾರಾಣಿ, ಮಹಾಜನ ವಿದ್ಯಾಸಂಸ್ಥೆಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಸಿ.ಕೆ. ರೇಣುಕಾರ್ಯ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಪತ್ರಿಭಾ ವೇದಿಕೆಯ ಸಂಚಾಲಕ ಎಂ.ನಾಗೇಶ, ವಿದ್ಯಾರ್ಥಿ ಸಂಸತ್‌ನ ಸಹ ಸಂಚಾಲಕ ಸಿ.ಎಲ್.ರೋಷನ್, ಪ್ರತಿಭಾ ವೇದಿಕೆಯ ಸಹ ಸಂಚಾಲಕಿ ಹಂಸವೇಣಿ, ಸಹಾಯಕ ಪ್ರಾಧ್ಯಾಪಕ ಸುನಿಲ್ ಇನ್ನಿತರರಿದ್ದರು.