ಕಲಬುರಗಿ: ಪ್ರಸಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ತೀವ್ರ ಕಳವಳ ವ್ಯಕ್ತಪಡಿಸಿದರು.
ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ, ಪಾಲಕರು ಅಂಕದ ಹಿಂದೆ ಬಿದ್ದಿದ್ದು ಸರಿಯಲ್ಲ. ಅಂಕ ಬೇಕು, ಆದರೆ ಅದೇ ವಿದ್ಯೆಯಲ್ಲ. ಸಮಗ್ರ ವಿದ್ಯೆ ಎಂಬುದು ಮೌಲ್ಯವನ್ನು ಒಳಗೊಂಡಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯ, ನೈತಿಕ ಶಿಕ್ಷಣ ಹೇಳಿಕೊಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಯಾವುದೇ ಹಂತದಲ್ಲೂ ಮಕ್ಕಳ ಮೇಲೆ ಬಲವಂತದ ಓದು ಹೇರಬಾರದು. ಮನಸ್ಸು ಕೇಂದ್ರೀಕೃತವಾಗಿಸಿ ಅಧ್ಯಯನ ಮಾಡಿ ಅಂಕಗಳ ಜತೆಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಹಣದ ಕೊರತೆಯಿಂದ ನಾಲ್ಕನೇ ತರಗತಿಗೆ ಪ್ರವೇಶ ಪಡೆಯುವುದನ್ನು ಕೈಬಿಟ್ಟಿದ್ದರು. ಅವರ ಸ್ನೇಹಿತ ಹೇಳಿಕೊಟ್ಟ ಉಪಾಯದಂತೆ ಮರಳಿ ತರಗತಿ ಪ್ರವೇಶಿಸಿದರು. ವಿದ್ಯೆ ಸುಖಾಸುಮ್ಮನೆ ಬರುವುದಿಲ್ಲ. ಅದರ ಹಿಂದೆ ಬಿದ್ದಾಗಲೇ ಒಲಿಯುತ್ತದೆ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಯೌವನ ಸಂದರ್ಭದಲ್ಲಿ ನಿಮ್ಮಲ್ಲಿನ ಶಕ್ತಿ ಹಾಳು ಮಾಡಿಕೊಳ್ಳದೆ ಜ್ಞಾನಾರ್ಜನೆಗೆ ಒತ್ತು ಕೊಡಬೇಕು. ಆಕರ್ಷಣೆಗಳು ಪ್ರಕೃತಿ ಸಹಜವಾದರೂ ಕಡಿವಾಣ ಅಗತ್ಯ. ಸ್ಪರ್ಧಾತ್ಮಕ ಯುಗದಲ್ಲಿ ದಿನದ ೨೪ ಗಂಟೆ ಓದಿದರೂ ಸಾಲದು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಬೇಕು. ಉತ್ತಮ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಬಂಢಾರ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಓದಿದ್ದನ್ನು ಜೀರ್ಣಿಸಿಕೊಂಡ ನಂತರ ಅದನ್ನು ಅಳವಡಿಸಿಕೊಳ್ಳಬೇಕು. ಭಾಷೆ ಮುಖ್ಯವಲ್ಲ, ವಿಚಾರ ಮುಖ್ಯ. ಮೂಲ ಜ್ಞಾನದ ಕೊರತೆ ನೀಗಿಸಿಕೊಳ್ಳಬೇಕು. ಮಾತಿನ ಬಗ್ಗೆ ಖಚಿತತೆ ಇರಬೇಕು. ಪರಿಶ್ರಮ-ಅದೃಷ್ಟಕ್ಕೆ ನಿಕಟ ಸಂಬಂಧವಿದೆ. ಹಾಗಂತ ಕೇವಲ ಅದೃಷ್ಟ ನಂಬಿ ಕುಳಿತುಕೊಳ್ಳಬಾರದು. ನಿರಂತರ, ಕಠಿಣ ಪರಿಶ್ರಮಪಟ್ಟರೆ ಅದೃಷ್ಟ ಖುಲಾಯಿಸುತ್ತದೆ ಎಂದರು.
ಹಿರಿಯ ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ನನ್ನ ನಾಡು, ನನ್ನ ದೇಶ, ನನ್ನ ಭಾಷೆ ಎಂಬ ವಿಶಾಲ ಮನೋಭಾವದೊಂದಿಗೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಆದರ್ಶರಾಗಿ ಬಾಳಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಹೃದಯ ದುರ್ಬಲವಾಗುತ್ತಿದೆ. ಪಠ್ಯ, ಪಠ್ಯೇತರ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯ ತೊಡಗಿಸಿಕೊಳ್ಳಬೇಕು. ದೇವರ ಸೃಷ್ಟಿಯಲ್ಲಿ ಇರುವವರೆಲ್ಲರೂ ಪ್ರತಿಭಾವಂತರು. ಪ್ರಾಮಾಣಿಕ ಪ್ರಯತ್ನದಿಂದ ಸಾಧನೆಗೈದು ದೇಶದ ಪ್ರಗತಿಗೆ ಕೈಜೋಡಿಸುವುದು ಯುವ ಜನಾಂಗದ ಕರ್ತವ್ಯ ಎಂದು ಅರ್ಥಪೂರ್ಣವಾಗಿ ಹೇಳಿದರು.
ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಅವಕಾಶ ದೊರೆತಾಗ ಸಮಯ ವ್ಯರ್ಥ ಮಾಡದೆ ಓದಿಗಾಗಿ ಬಳಸಬೇಕು. ದುಶ್ಚಟದ ದಾಸರಾಗದೆ ಶರಣರು, ಸಂತರು, ದಾಸಶ್ರೇಷ್ಠ ಸಾಧಕರಂತೆ ಬಾಳಬೇಕು. ಉತ್ತಮ ಆಹಾರ, ಯೋಗ, ವ್ಯಾಯಾಮ ಮೂಲಕ ಸಕಾರಾತ್ಮಕ ಚಿಂತನೆ, ಜ್ಞಾನದ ಹಂಬಲ ಹೊಂದಬೇಕು ಏಕಾಗ್ರತೆಯಲ್ಲಿ ನಮ್ಮ ಗುರಿ ಅಡಗಿದೆ. ಹೀಗಾಗಿ ಓದಿ ಜೀವನ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ವಿಶ್ರಾಂತ ನ್ಯಾಯಾಧೀಶ ಎಸ್.ಎಂ. ರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಯು ಸುರೇಶ ಅಕ್ಕಣ್ಣಾ, ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ ಚನ್ನಾರಡ್ಡಿ ಪಾಟೀಲ್, ಸಂಗೀತಾ ಅಭಿಷೇಕ ಪಾಟೀಲ್, ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ, ವಿನೂತಾ ಆರ್.ಬಿ., ಪ್ರಭುಗೌಡ ಪಾಟೀಲ್, ಕರುಣೇಶ ಹಿರೇಮಠ ಇತರರಿದ್ದರು. ಪ್ರಿಯಾ ಸಂಗಡಿಗರು ಪ್ರಾರ್ಥಿಸಿದರು. ಡಾ.ವಿದ್ಯಾವತಿ ಪಾಟೀಲ್, ಚಂದ್ರಕಾಂತ ನಿರೂಪಣೆ ಮಾಡಿದರು. ಗುರುರಾಜ ಕುಲಕರ್ಣಿ ವಂದಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.
ಭಾಷಾ ಸಂಪತ್ತಿನ ಕೊರತೆಯಿಂದಾಗಿ ಎಷ್ಟೋ ವಿದ್ಯಾವಂತರಿಗೆ ಸಮರ್ಪಕ ಮಾತನಾಡಲು ಬರುತ್ತಿಲ್ಲ. ವಿಷಯ ಗೊತ್ತಿದ್ದರೂ ಮಾತನಾಡಲು ಭಾಷಾ ಕೌಶಲ ಕೊರತೆ ಕಾಡುತ್ತಿದೆ. ಒಳ್ಳೆಯ ವಿಚಾರಗಳು ಎಲ್ಲಿಂದಲೋ ಬಂದರೂ ಸ್ವೀಕರಿಸಬೇಕು. ಸದ್ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಿದಾಗ ವಿದ್ಯೆ ಒಲಿದು ಬರಲಿದೆ.
| ವಿ.ಶ್ರೀಶಾನಂದ ಹೈಕೋರ್ಟ್ ನ್ಯಾಯಮೂರ್ತಿ