ಮೂಡಿಗೆರೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಯನಾ ಮೋಟಮ್ಮ, ರಮೇಶ್ ಹೊಸ್ಕೆರೆ, ದೇವೇಂದ್ರ, ತಿಮ್ಮರಾಜ್, ಸತ್ಯನಾರಾಯಣ, ದಯಾವತಿ, ಮೀನಾಕ್ಷಿ ಇತರರಿದ್ದರು.  
ಜಿಲ್ಲೆ

ಶಿಕ್ಷಣ ವ್ಯವಸ್ಥೆ ದೂರುವ ಬದಲು ಸರಿಪಡಿಸಿ

ಮೂಡಿಗೆರೆ: ಶಿಕ್ಷಣ ವ್ಯವಸ್ಥೆಯನ್ನು ದೂರುವುದನ್ನು ಬಿಟ್ಟು ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದಾಗ ಮಾತ್ರ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಪರಿವರ್ತನೆಯಾಗುತ್ತದೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸೀನಿಯರ್ ಮ್ಯಾನೇಜರ್ ಸಂದೀಪ್ ಎಸ್.ವಶಿಷ್ಠ ಹೇಳಿದರು.

ಮಂಗಳವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು. ರಾಷ್ಟ್ರೀಯ ಮೌಲ್ಯದ ಅರಿವು ಶಾಲೆಗಳಲ್ಲಿ ಮಾತ್ರ ಸಿಗಲು ಸಾಧ್ಯ. ನಾವು ಖರ್ಚು ಮಾಡಿದಷ್ಟೂ ಹಣ ಖಾಲಿಯಾಗುತ್ತದೆ. ಆದರೆ ವಿದ್ಯೆ ಎಷ್ಟೇ ಖರ್ಚು ಮಾಡಿದರೂ ಮತ್ತಷ್ಟು ವದ್ಧಿಸುತ್ತದೆ. ಮಕ್ಕಳ ಭವಿಷ್ಯ ರೂಪಿಸುವ ಪುಣ್ಯದ ಕಾರ್ಯ ಶಿಕ್ಷಕರಿಗೆ ದೊರಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಶಿಕ್ಷಣದ ದಾರಿಯನ್ನು ಸುಗಮ ಮಾಡಿಕೊಂಡು, ಪ್ರತಿ ವಿದ್ಯಾರ್ಥಿಯಲ್ಲಿರುವ ಪ್ರತಿಭೆ ಹೊರತರುವ ಮೂಲಕ ಆತ್ಮವಿಶ್ವಾಸ ಬೆಳೆಸಬೇಕು ಎಂದು ಹೇಳಿದರು.

ಶಿಕ್ಷಣದ ಮಹತ್ವದ ಬಗ್ಗೆ ಎಷ್ಟೋ ಜನರಿಗೆ ಅರಿವಿರುವುದಿಲ್ಲ. ಶಾಲೆಯಲ್ಲಿ ಕಲಿಯುವ ವಿಜ್ಞಾನ ವಿಷಯ ವೈಜ್ಞಾನಿಕ ಮನೋಭಾವ ಉಂಟು ಮಾಡುತ್ತದೆ. ಗಣಿತ ವಿಷಯ ಸ್ಪಷ್ಟತೆಯನ್ನುಂಟುಮಾಡುತ್ತದೆ. ಹೀಗೆ ಒಂದೊಂದು ವಿಷಯ ತನ್ನದೇ ಆದ ಭಾವನೆ ಮೂಡಿಸುತ್ತದೆ. ಹಾಗಾಗಿ ಶಿಕ್ಷಣ ಅಂಕ ಮತ್ತು ಬೋಧನೆಗೆ ಸೀಮಿತಗೊಳಿಸಿದರೆ ಈ ಸಮಾಜ ಭಾವನೆಗಳಿಲ್ಲದ ಸಾಕ್ಷರತೆಯಾಗುತ್ತದೆ. ಅದಕ್ಕಾಗಿ ಶಿಕ್ಷಕ ವತ್ತಿಯ ಸಾರ್ಥಕ್ಯ ಜ್ಞಾನದ ಮೇಲೆ ಪ್ರೀತಿ, ಒಲವು ಹುಟ್ಟಿಸುವಂತಹ ಬೋಧನೆ ಮಾಡಬೇಕಿದೆ ಎಂದು ಹೇಳಿದರು.

24 ಮಂದಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹಳೇಮೂಡಿಗೆರೆ ಗ್ರಾಪಂ ಅಧ್ಯಕ್ಷ ರಂಜಿತಾ, ಪಪಂ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ಡಿಡಿಪಿಒ ತಿಮ್ಮರಾಜ್, ಜಿಲ್ಲಾ ನೋಡಲ್ ಅಧಿಕಾರಿ ಸತ್ಯನಾರಾಯಣ, ತಾಪಂ ಇಒ ದಯಾವತಿ, ಬಿಇಒ ಮೀನಾಕ್ಷಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆ ಪದಾಧಿಕಾರಿಗಳು ಇದ್ದರು.

ದೇಶದ ಬೆನ್ನೆಲುಬಾಗಿ ಪ್ರಮುಖ ಪಾತ್ರ ವಹಿಸುವುದು ರೈತರು ಹಾಗೂ ಶಿಕ್ಷಕರು. ಸಮಾಜದಲ್ಲಿ ಯಾವುದೇ ವ್ಯಕ್ತಿ ಉನ್ನತ ಸ್ಥಾನ ಪಡೆದಿದ್ದದಾರೆಂದರೆ ಅದರ ಶ್ರೇಯಸ್ಸು ಅವರಿಗೆ ಕಲಿಸಿದ ಶಿಕ್ಷಕರಿಗೆ ಸಲ್ಲಬೇಕು. ತಂತ್ರಜ್ಞಾನ ಮುಂದುವರಿದಂತೆ ಜೀವನ ಶೈಲಿಯೂ ಬದಲಾಗುತ್ತಿದೆ. ಹಾಗಾಗಿ ಶಿಕ್ಷಣದ ಜತೆಗೆ ಆರ್ಟಿಫಿಯಲ್ ಇಂಟಲಿಜೆಂಟ್ ಬಗ್ಗೆ ಶಿಕ್ಷಕರು ತಿಳಿದುಕೊಳ್ಳಬೇಕು ಎಂದು ಶಾಸಕಿ ನಯನಾ ಮೋಟಮ್ಮ ಸಲಹೆ ನೀಡಿದರು. ನಾನು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದಾದ ಶೌಚಗೃಹದ ಅವ್ಯವಸ್ಥೆ ಗಮನಕ್ಕೆ ಬಂದಿತು. ದುರಸ್ತಿಗೆ ಬೇಕಾದ ಅನುದಾನ ನಾನು ನೀಡುತ್ತೇನೆಂದು ಹೇಳಿದ್ದೇನೆ. ಸ್ವಚ್ಛತೆ ಮತ್ತು ಶೌಚಗೃಹ ಕಡೆಗಣಿಸಿದರೆ ದೇಶ ಮುಂದುವರಿಯಲು ಸಾಧ್ಯವಿಲ್ಲ. ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅಲ್ಲದೇ ಸಾಧ್ಯವಾದಷ್ಟು ಶಾಲೆಗಳನ್ನು ಕೆಪಿಎಸ್ ಮಾಡಲು ಚಿಂತಿಸಿದೆ. ಹಾಗಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸೇರ್ಪಡೆಗೆ ಗಮನಹರಿಸಬೇಕು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡುತ್ತೇನೆಂದು ಭರವಸೆ ನೀಡಿದರು.