ಜಿಲ್ಲೆ

ಶಿಕ್ಷಣ ಬದುಕು ಬದಲಾಯಿಸುವ ಸಾಧನ

ಚಾಮರಾಜನಗರ : ಜಿಲ್ಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರು ಪಾಲುದಾರರಾಗಿದ್ದು, ಶಿಕ್ಷಣ ಪ್ರತಿಯೊಬ್ಬರ ಬದುಕನ್ನು ಬದಲಾಯಿಸುವ ಸಾಧನವಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಡಾ.ರೇಣುಕಾದೇವಿ ತಿಳಿಸಿದರು.

ನಗರದ ಜೆಎಸ್‌ಎಸ್ ಕಾಲೇಜಿನ ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಹಾಗೂ ಶಿಕ್ಷಕ ಸ್ಫೂರ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಪ್ರೌಢಶಾಲಾ ವಿಭಾಗದಲ್ಲಿ ಈ ಬಾರಿ ನಮ್ಮ ಜಿಲ್ಲೆ 14 ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಬಾರಿ ಇದನ್ನು ಮೀರಿ ಒಂದಂಕಿಯ ಸಾಲಿನಲ್ಲಿ ಫಲಿತಾಂಶ ಬರುವಂತೆ ಕ್ರಮ ವಹಿಸಿ ಎಂದು ತಿಳಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಹೆಚ್ಚಿನದಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಶ್ರಮ ಅಡಗಿದೆ. ಶಿಕ್ಷಕರು ಸಮಾಜವನ್ನು ತಿದ್ದುವ ಮತ್ತು ಉತ್ತಮ ಪ್ರಜೆಗಳನ್ನು ರೂಪಿಸುವ ಗುರುಗಳಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಡಯಟ್ ಉಪನಿರ್ದೇಶಕ ಕಾಶೀನಾಥ್, ಸರ್ಕಾರಿ ನೌಕರರ ಸಂಘದ ಖಜಾಂಚಿ ಶಿವಕುಮಾರಯ್ಯ, ಮಾಜಿ ಅಧ್ಯಕ್ಷ ಸಿದ್ದಮಲ್ಲಪ್ಪ, ಉಪಾಧ್ಯಕ್ಷರಾದ ಶಾಂತರಾಜು, ಖಜಾಂಚಿ ಮಹೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಎಸ್.ಆರ್. ಸಹ ಕಾರ್ಯದರ್ಶಿ ಗಜೇಂದ್ರ ಇತರರು ಇದ್ದರು.