ಎನ್.ಆರ್.ಪುರ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ಎಸ್‌ಐ ನಿರಂಜನ್ ಗೌಡ ಹೇಳಿದರು.
ಮೆಣಸೂರು ಗ್ರಾಮದ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಮೆಲ್ ಮಾತೆಯ ದಿನ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪಾಲಕರ ಕಷ್ಟ ಅರಿತುಕೊಂಡು ಉತ್ತಮವಾಗಿ ವ್ಯಾಸಂಗ ಮಾಡಬೇಕು. ಪಿಯುಸಿ ಹಂತದಲ್ಲಿ ಭೌತಿಕ ಮತ್ತು ಮಾನಸಿಕ ಬದಲಾವಣೆಯಾಗಲಿದೆ. ಬದುಕಿಗೆ ಬುನಾದಿ ಹಾಕುವ ವಯಸ್ಸು. ಪ್ರತಿಯೊಂದೂ ಸುಂದರವಾಗಿ ಕಾಣುವ, ಆಕರ್ಷಿತವಾಗುವ ಹಂತವಾಗಿದ್ದು ಮನಸ್ಸು ಚಂಚಲವಾಗುವುದರಿಂದ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಓದಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಪಿಯುಸಿ ಹಂತ ಜೀವನದ ದಿಕ್ಕನ್ನು ಬದಲಾಯಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತನ್ನದೇ ಆದ ಸಾಮರ್ಥ್ಯವಿದ್ದು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಜೀವನದಲ್ಲಿ ಸೋಲ-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳ ಬೇಕು ಎಂದರು.
ಕಾರ್ಮೆಲ್ ವಿದ್ಯಾಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಜೋಯಿಸ್ ಮಾತನಾಡಿ, ಶಿಕ್ಷಣವೆಂದರೆ ಕೇವಲ ಬರೆಯವುದು, ಓದುವುದನ್ನು ಕಲಿಯುವುದಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯ, ನೈತಿಕತೆ, ನಂಬಿಕೆ, ಪ್ರೀತಿ, ವಿಶ್ವಾಸಗಳನ್ನು ಬೆಳೆಸುವುದಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲೆ ಸಿಸ್ಟರ್ ಶುಭಾ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಮೆಲ್ ಮಾತೆ ಹಬ್ಬದ ಪ್ರಯುಕ್ತ ಅತಿಥಿಗಳು ಕೇಕ್ ಕತ್ತರಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.