ಕಂಪ್ಲಿ: ಹೂಗಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸುವುದಾಗಿ ಶಾಸಕ ಜೆ.ಎನ್.ಗಣೇಶ್ ಭರವಸೆ ನೀಡಿದರು.
ಪಟ್ಟಣದಲ್ಲಿ ಹೂಗಾರ ಸಮಾಜ ಸೇವಾ ಸಂಘದಿಂದ ಹಮ್ಮಿಕೊಂಡಿದ್ದ ಶಿವಶರಣ ಹೂಗಾರ ಮಾದಯ್ಯ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ನಿಗಮಕ್ಕೆ ಅನುದಾನ ನಿಡುವಂತೆ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವುದರೊಂದಿಗೆ ನಿಯೋಗ ತೆರಳಿ ಸಿಎಂರನ್ನು ಒತ್ತಾಯಿಸುತ್ತೇನೆ. ಹೂಗಾರ ಸಮುದಾಯ ಶಿಕ್ಷಣ ಪಡೆಯುವ ಮೂಲಕ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.
ಹೂಗಾರ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ರವಿ ಹೂಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರವೇ ಶಿವಶರಣ ಹೂಗಾರ ಮಾದಯ್ಯ ಜಯಂತ್ಯುತ್ಸವ ಆಚರಿಸಬೇಕು. ಪಟ್ಟಣದಲ್ಲಿ ಹೂಗಾರ ಸಮುದಾಯ ಭವನ ನಿರ್ಮಿಸಿಕೊಡುವಲ್ಲಿ ಶಾಸಕರು ಆಸಕ್ತಿ ತೋರಬೇಕು ಎಂದರು.
ಕ್ಯಾದಿಗೆಹಾಳ್ ಶಿವಲಿಂಗಪ್ಪ ತಾತ ಸಾನ್ನಿಧ್ಯ ವಹಿಸಿದ್ದರು. ಹೂಗಾರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದು ಹೂಗಾರ, ಕಲ್ಯಾಣ ಕರ್ನಾಟಕ ಭಾಗದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೂಗಾರ, ಬಳ್ಳಾರಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ, ಯಾದಗಿರಿ ಜಿಲ್ಲಾಧ್ಯಕ್ಷ ಭೀಮಣ್ಣ ಹೂಗಾರ, ಪುರಸಭೆ ಸದಸ್ಯರಾದ ಹೂಗಾರ ರಮೇಶ, ಸಿ.ಆರ್.ಹನುಮಂತ, ಪದಾಧಿಕಾರಿಗಳಾದ ಗಣೇಶ ಹೂಗಾರ, ಜೀರು ಗಾದಿಲಿಂಗ, ಹೂಗಾರ ಶೇಖರಪ್ಪ, ಜೀರು ಇತರರಿದ್ದರು. ಇದಕ್ಕೂ ಮುನ್ನ ಶಿವಶರಣ ಹೂಗಾರ ಮಾದಯ್ಯ ಭಾವಚಿತ್ರದ ಮೆರವಣಿಗೆ ನಡೆಯಿತು.