ಜಿಲ್ಲೆ

ಶಿಕ್ಷಣ ಧರ್ಮದಂತೆ ಮನೆ ಬಾಗಿಲಿಗೆ ತಲುಪಬೇಕು: ಯಾದಗಿರಿ ಡಿಸಿ ಆರ್.ಸ್ನೇಹಲ್

ಮೈಸೂರು: ಸ್ವಾಮಿ ವಿವೇಕಾನಂದರು ಕನಸು ಕಂಡಂತೆ ಶಿಕ್ಷಣ ಧರ್ಮದ ರೀತಿಯಲ್ಲಿ ಜನರ ಮನೆ ಬಾಗಿಲಿಗೆ ತಲುಪಬೇಕು ಎಂದು ಯಾದಗಿರಿ ಜಿಲ್ಲಾಧಿಕಾರಿ ಆರ್.ಸ್ನೇಹಲ್ ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ಹೆಬ್ಬಾಳದಲ್ಲಿರುವ ವಿ-ಲೀಡ್ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ 2ನೇ ದಿನದ ‘ಯುವಪಯಣ’ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಿಕ್ಷಣದ ಅವಶ್ಯಕತೆ ಸಮುದಾಯಕ್ಕೆ ತಲುಪಿಸಿದಾಗ ಅದರ ಉದ್ದೇಶ ಸಾರ್ಥಕವಾಗುತ್ತದೆ. ಈ ರೀತಿಯ ರಚನಾತ್ಮಕ ಕಾರ್ಯದಲ್ಲಿ ಹಿಂದೆ ಭಾರತದ ಸಾಧು-ಸಂತರು ತೊಡಗಿಕೊಂಡಿದ್ದರು ಎಂದು ಸ್ಮರಿಸಿದರು.

ಮಕ್ಕಳು ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸಲು ಬದ್ಧತೆ, ಶಿಸ್ತು, ಸಮಯ ಪ್ರಜ್ಞೆ, ಮತ್ತು ಅವಕಾಶ ಮುಖ್ಯ.ನಿಮ್ಮ ಕೆಲಸವೇ ನಿಮಗೆ ಸ್ಫೂರ್ತಿ. ಇದು ಕ್ಷಣಿಕವಾಗಿರದೆ ಜೀವನ ಪೂರ್ತಿ ಉಳಿಯುವಂತೆ ಇರಬೇಕು. ಈ ವಿಚಾರವನ್ನು ಅನೇಕ ಉದಾಹಣೆಗಳೊಂದಿಗೆ ಮಕ್ಕಳ ಮನ ಮುಟ್ಟುವಂತೆ ವಿವರಿಸಿದರು.

ಸಾಮಾನ್ಯವಾಗಿ ನಾವು ಮಾಡದ ಕೆಲಸಕ್ಕೆ ಒತ್ತಡದ ನೆಪ ಹೇಳುತ್ತೇವೆ. ನಮ್ಮ ದೇಶದ ರೈತರು ಎಷ್ಟೇ ಕಠಿಣ ಪರಿಸ್ಥಿತಿಯಲ್ಲೂ ಒತ್ತಡಕ್ಕೆ ಒಳಗಾಗದೆ ತಮ್ಮ ದೈನಂದಿನ ಕಾರ್ಯ ಮಾಡಿಕೊಂಡು ಹೋಗುತ್ತಿರುವುದು ನಮ್ಮೆಲ್ಲರಿಗೂ ಆದರ್ಶವಾಗಬೇಕು ಎಂದರು.

ವಿವೇಕ ಸ್ಕಾಲರ್ ಪ್ರೋಗ್ರಾಂ ಯೋಜನೆಯಲ್ಲಿ ಹೆಣ್ಣು ಮಕ್ಕಳೇ ಹೆಚ್ಚು ಫಲಾನುಭವಿಗಳಾಗಿರುವುದು ಸಂತಸದ ಸಂಗತಿ. ಹೆಣ್ಣು ಮಕ್ಕಳಲ್ಲಿ ಬಹು ಕೆಲಸಗಳನ್ನು ಏಕ ಕಾಲದಲ್ಲಿ ಮಾಡುವ ಕುಶಲತೆ ಸಹಜವಾಗಿ ಬಂದಿರುತ್ತದೆ. ಈ ಮೂಲಕ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಲ್ಲಿ ದೇಶದ ಪ್ರಗತಿಯ ಮುಂಚೂಣಿಗೆ ಬರಲು ಸಾಧ್ಯ ಎಂದು ಹೇಳಿದರು.

ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಾನಂದಜೀ ಮಹಾರಾಜ ಮಾತನಾಡಿ, ವ್ಯಕ್ತಿ ನಿರ್ಮಾಣದಿಂದ ಕುಟುಂಬ, ಸಮಾಜ ಹಾಗೂ ಸದೃಢ ಸಮಜ ನಿರ್ಮಾಣ ಸಾಧ್ಯ. ಯೋಗ ಮತ್ತು ಆಧ್ಯಾತ್ಮ ಅಧ್ಯಯನಕ್ಕಾಗಿ ಪ್ರಪಂಚದ ಎಲ್ಲ ರಾಷ್ಟ್ರಗಳು ಭಾರತದತ್ತ ನೋಡುತ್ತಿವೆ. ಈ ರೀತಿಯ ಹಲವು ವಿಷಯಗಳಲ್ಲಿ ಭಾರತ ಜಗದ್ಗುರು ಆಗುವತ್ತ ಸಾಗಿದೆ. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಹೊಸ ವಿಚಾರಗಳ ಕಲಿಕೆಗೆ ಮಕ್ಕಳು ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ವಿವೇಕ ಸ್ಕಾಲರ್ ಪ್ರೋಗ್ರಾಂ ಅಡಿಯಲ್ಲಿ ಪ್ರಯೋಜನ ಪಡೆದು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರು ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು. 2021-22ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಬೆಂಗಳೂರು, ಹಾಸನ, ಮೈಸೂರು, ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಿಂದ ಈ ಯೋಜನೆಯಲ್ಲಿ ಕಲಿಯುತ್ತಿರುವ 298 ವಿದ್ಯಾರ್ಥಿಗಳು ಭಾಗವಹಿಸಿದ್ದರು.