ಮೈಸೂರು: ಶಿಕ್ಷಣದಲ್ಲಿ ಔದ್ಯೋಗಿಕ ಆಯಾಮಕ್ಕೆ ಹೆಚ್ಚಿನ ಒತ್ತು ನೀಡಿ ಸಾಂಸ್ಕೃತಿಕ ಆಯಾಮವನ್ನು ನಿರ್ಲಕ್ಷೃ ಮಾಡಿದ್ದರಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮೈಸೂರು ಕೃಷ್ಣಮೂರ್ತಿ ವಿಶ್ಲೇಷಿಸಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ 2022-23ನೇ ಶೈಕ್ಷಣಿಕ ಸಾಲಿನ ಕಲಾ, ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣಕ್ಕೆ ಔದ್ಯೋಗಿಕ ಮತ್ತು ಸಾಂಸ್ಕೃತಿಕ ಆಯಾಮಗಳಿವೆ. ಕೇವಲ ಔದ್ಯೋಗಿಕ ಆಯಾಮಕ್ಕೆ ಮಾತ್ರ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಸಾಂಸ್ಕೃತಿಕ ಆಯಾಮವನ್ನು ಕಡೆಗಣಿಸಲಾಗುತ್ತಿದೆ. ಆದ್ದರಿಂದಲೇ ಹೆಚ್ಚು ವ್ಯಾಸಂಗ ಮಾಡಿರುವ ವೈದ್ಯರು, ಇಂಜಿನಿಯರುಗಳು ಮತ್ತು ಐಎಎಸ್ ಅಧಿಕಾರಿಗಳೂ ಸಹ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬದುಕು ಸಾರ್ಥಕವಾಗಬೇಕಾದರೆ ಸವಾಲುಗಳನ್ನು ಸಹಿಸಿಕೊಳ್ಳುವ ಮತ್ತು ಎದುರಿಸುವ ಶಕ್ತಿ ಎರಡೂ ಅತ್ಯವಶ್ಯಕ. ಇವುಗಳನ್ನು ನಾವು ವಿದ್ಯಾರ್ಥಿ ದಿಸೆಯಲ್ಲಿಯೇ ಬೆಳೆಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಪ್ರಸ್ತುತ ಇಡೀ ಪ್ರಪಂಚವನ್ನು ಅಹಂಕಾರದ ಮನೋಭಾವ ವ್ಯಾಪಿಸುತ್ತಿದೆ. ದೇಶ-ದೇಶಗಳ ನಡುವೆ ಯುದ್ಧಗಳು ಸಂಭವಿಸುತ್ತಿರುವುದು ಇದೇ ಕಾರಣಕ್ಕೆ. ಇದೇ ಪ್ರವೃತ್ತಿ ಮುಂದುವರಿದರೆ ಭವಿಷ್ಯದಲ್ಲಿ ಪರಮ ಅಂಧಕಾರದ ಯುಗದ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಪರಮ ಆಧ್ಯಾತ್ಮಿಕ ಯುಗದ ನಿರ್ಮಾಣವಾಗಬೇಕಾದರೆ ಅಹಂಕಾರ ನಾಶವಾಗಬೇಕು. ಅಹಂಕಾರವನ್ನು ನಾಶಮಾಡುವ ಶಕ್ತಿ ಇರುವುದು ಕಲೆಗೆ ಮಾತ್ರ. ಆದ್ದರಿಂದ ವಿದ್ಯಾರ್ಥಿಗಳು ಕೇವಲ ಪಠ್ಯನಿಷ್ಠ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿರದೆ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಕೆ. ಶ್ರೀನಿವಾಸಮೂರ್ತಿ ಮಾತನಾಡಿ, ಸಾಧನೆಗೆ ಸಮಯಪ್ರಜ್ಞೆ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಕೆಲಸವನ್ನು ಮಾಡಿದರೆ ಮಾತ್ರ ವ್ಯಕ್ತಿ ಮುಂದೆ ಬರಲು ಸಾಧ್ಯ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಪಡೆಯುವುದಕ್ಕೆ ಪ್ರಯತ್ನಿಸಬೇಕು. ಇದರ ಜತೆಗೆ ಉತ್ತಮ ಸಂಸ್ಕಾರ ಬೆಳೆಸಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.
ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಎಸ್.ಹರೀಶ್ ಮಾತನಾಡಿ, ಕ್ರೀಡೆಯಲ್ಲಿ ಸಫಲರಾಗಲು ಕೌಶಲ ಮತ್ತು ಪ್ರತಿಭೆ ಎರಡೂ ಮುಖ್ಯ ಎಂದರು. ಪ್ರಾಂಶುಪಾಲ ಎಸ್. ಸೋಮಶೇಖರ್,ಉಪನ್ಯಾಸಕರಾದ ಟಿ.ಗುರುಪಾದಸ್ವಾಮಿ, ಎಂ. ಶಿವಕುಮಾರ್, ವಿ.ವಾಣಿ ಇನ್ನಿತರರು ಇದ್ದರು.