ಔರಾದ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ಕಾರ್ಯಾಗಾರವನ್ನು ಶಾಸಕ ಪ್ರಭು ಚವ್ಹಾಣ್ ಉದ್ಘಾಟಿಸಿದರು. ಬಸವರಾಜ ಪಾಟೀಲ್ ಸೇಡಂ, ಗುಂಡಪ್ಪ ಬಿರಾದಾರ್, ಚೇತನರಾಮ ಮೈಸೂರು, ರೇವಣಸಿದ್ಪಪ್ಪ ಜಲಾದೆ, ಖಾಜಾ ಖಲೀಲುಲ್ಲಾ ಇತರರಿದ್ದರು. 
ಜಿಲ್ಲೆ

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ

ಔರಾದ್: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದು, ಅನುದಾನರಹಿತ ಖಾಸಗಿ ಶಾಲೆಗಳು ಸೇರಿ ಎಲ್ಲರ ಸಹಕಾರದ ಅಗತ್ಯವಿದೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.

ಕಲ್ಯಾಣ ಕರ್ನಾಟಕ ಅನುದಾನರಹಿತ ಖಾಸಗಿ ಅಡಳಿತ ಮಂಡಳಿ ಸಂಘದಿಂದ ಶನಿವಾರ ಪಟ್ಟಣದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಕರಿಗೆ ಅತ್ಯಂತ ಹೆಚ್ಚಿನ ಗೌರವವಿದೆ. ಅದಕ್ಕೆಂದೇ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರ ಜತೆಗೆ ಹೋಲಿಸಲಾಗಿದೆ. ಶಿಕ್ಷಕರು ಸಹ ಅದಕ್ಕೆ ತಕ್ಕಂತೆ ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕು. ಕುಂಬಾರ ಮಣ್ಣಿಗೆ ಮಡಿಕೆ, ಕುಡಿಗಳ ಆಕಾರ ನೀಡುವಂತೆ ಮಕ್ಕಳ ಭವಿಷ್ಯಕ್ಕೆ ಒಳ್ಳೆಯ ಆಕಾರ ನೀಡಬೇಕು ಎಂದು ಸಲಹೆ ನೀಡಿದರು.

ಮಹಾಜನತೆಯ ಆಶೀರ್ವಾದದಿಂದ ಜನಸೇವೆ ಮಾಡುವ ಅವಕಾಶ ದೊರೆತಿದ್ದು, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ. ಸರ್ಕಾರದ ಯೋಜನೆಗಳನ್ನು ಜನರ ಬಳಿ ಕೊಂಡೊಯ್ಯಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಶಿಕ್ಷಣ ಕ್ಷೇತ್ರದ ವಿಕಾಸಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮನೋಬಲ ವೃದ್ಧಿಸಿ ಫಲಿತಾಂಶ ಸುಧಾರಿಸಲು ಪ್ರತಿವರ್ಷ ಸನ್ಮಾನಿಸುತ್ತ ಬಂದಿದ್ದೇನೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳಲ್ಲೂ ಸಾಕಷ್ಟು ಸಮಸ್ಯೆಗಳಿರುವುದು ನನ್ನ ಗಮನಕ್ಕಿದ್ದು, ಸರಿಪಡಿಸಲು ಪ್ರಯತ್ನಿಸುತ್ತಿದ್ದೇನೆ. ಕಾನೂನು ಚೌಕಟ್ಟಿನಲ್ಲಿ ಅಗತ್ಯ ಸಹಕಾರ ನೀಡುತ್ತೇನೆ. ಶಿಕ್ಷಕರಿಗೆ ಯಾವುದೇ ಸಮಸ್ಯೆ ಎದುರಾದರೂ ನೇರವಾಗಿ ಬಂದು ತಿಳಿಸಿ. ನಾನು ನಿಮ್ಮ ಜತೆಗಿದ್ದೇನೆ. ನಿರಾತಂಕವಾಗಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದಾರೆ. ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣದಲ್ಲಿ ಅವರ ಪಾತ್ರವೂ ಬಹಳಷ್ಟಿದೆ. ಅವರ ಸಹಕಾರ-ಮಾರ್ಗದರ್ಶನದಂತೆ ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಅನುದಾನ ಘೋಷಣೆ ಮಾಡಿದ್ದರು. ಅವರನ್ನು ಮಾದರಿಯಾಗಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದರು.

ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಚೇತನರಾಮ ಮೈಸೂರು ವಿಶೇಷ ಉಪನ್ಯಾಸ ನೀಡಿದರು. ಮಾಜಿ ಶಾಸಕ ಗುಂಡಪ್ಪ ಬಿರಾದಾರ, ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲಾ, ಸಿಪಿಐ ರಘುವೀರಸಿಂಗ್ ಠಾಕೂರ್, ಅನುದಾನರಹಿತ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರೇವಣಸಿದ್ಪಪ್ಪ ಜಲಾದೆ, ಕಾರ್ಯದರ್ಶಿ ಗುರುನಾಥರಡ್ಡಿ, ಜಿಲ್ಲಾಧ್ಯಕ್ಷ ರಾಜಶೇಖರ ಮಣಿಗೇರೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಂಢರಿ ಆಡೆ, ಕಸಾಪ ತಾಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ, ಸಂಜು ಶೆಟಕಾರ, ಸಚಿನ್ ರಾಠೋಡ್, ರಾಜಕುಮಾರ ಹಮೀಲಪುರೆ, ಸಂಜುಕುಮಾರ ಮುಧೋಳ, ಸೂರ್ಯಕಾಂತ ಬಿರಾದಾರ್, ಅನೀಲ ದೇಶಮುಖ, ರತಿಕಾಂತ ಅತಿವಾಳೆ, ಗುರುನಾಥ ದೇಶಮುಖ, ಕೃಷ್ಣಾ ಪಾಟೀಲ್ ಇತರರಿದ್ದರು.

ಭಾರತದಲ್ಲಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಕೊಡುಗೆ ಅಪಾರ. ರಾಧಾಕೃಷ್ಣನ್ ಹಾಕಿಕೊಟ್ಟ ಮಾರ್ಗದಲ್ಲಿ ಶಿಕ್ಷಕರು ಮುನ್ನಡೆಯಬೇಕು. ಅವರನ್ನು ಮಾದರಿಯಾಗಿ ಇಟ್ಟುಕೊಂಡು ತಮ್ಮ ಸೇವೆ ಮುಂದುವರಿಸಬೇಕು.

| ಪ್ರಭು ಚವ್ಹಾಣ್ ಶಾಸಕ

ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳನ್ನು ತಿದ್ದಿ ಉತ್ತಮ ನಾಗರಿಕರನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸಂದರ್ಭಕ್ಕೆ ತಕ್ಕಂತೆ ಕೌಶಲ ವೃದ್ಧಿಸಿಕೊಂಡು ಮಕ್ಕಳಿಗೆ ಪಾಠ ಬೋಧನೆ ಮಾಡಬೇಕು.

| ಬಸವರಾಜ ಪಾಟೀಲ್ ಸೇಡಂ ಮಾಜಿ ಸಂಸದ