ಕಲಬುರಗಿ: ಶಿಕ್ಷಣ, ಆರೋಗ್ಯ ಮತ್ತು ಹೈನುಗಾರಿಕೆ ಸೇರಿ ನಾಡಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಕೊಡುಗೆ ಅಪಾರ ಎಂದು ಶಾಸಕ ಬಸವರಾಜ ಮತ್ತಿಮಡು ಬಣ್ಣಿಸಿದರು.
ನಗರದ ಎಸ್‌ಆರ್‌ಎನ್ ಮೆಹತಾ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಡಾ.ಹೆಗ್ಗಡೆಯವರ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಮಹಿಳೆಯರ ಆರ್ಥಿಕ ಚೇತರಿಕೆ, ಸ್ವಾವಲಂಬನೆ ಮೂಲಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಪೂಜ್ಯ ಹೆಗ್ಗಡೆ ತರುತ್ತಿದ್ದಾರೆ. ನಗರ ಸೇರಿ ಗ್ರಾಮೀಣ ಮಹಿಳೆಯರು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜನೋಪಯೋಗಿ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ತಮ್ಮ ಜೀವನವನ್ನೇ ಸಮಾಜಕ್ಕಾಗಿ ಮೀಸಲಿಟ್ಟ ಪೂಜ್ಯರು, ಸರ್ಕಾರದ ಯೋಜನೆಗಳೊಂದಿಗೆ ಕೈಗೂಡಿಸಿ ಅರ್ಹ ಫಲಾನುಭವಿಗಳಿಗೆ ಲಾಭ ತಲುಪಿಸುತ್ತಿರುವ ಪರಿಣಾಮವಾಗಿ ಇಂದು ಕಲಬುರಗಿ ವಿಭಾಗದಲ್ಲೂ ಹತ್ತಾರು ಸಾವಿರ ಮಹಿಳೆಯರು ಧರ್ಮಸ್ಥಳ ಸಂಸ್ಥೆಯೊAದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಪೂಜ್ಯ ಹೆಗ್ಗಡೆ ಬದುಕು ಯುವ ಪೀಳಿಗೆಗೆ ಆದರ್ಶಪ್ರಾಯ ಎಂದು ಹೇಳಿದರು.
ಗುರುವಂದನೆ ಸ್ವೀಕರಿಸಿದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಕಲಬುರಗಿ ಜಿಲ್ಲೆ ಜನ ಭಕ್ತಿ, ಪ್ರೀತಿ, ಗೌರವ ಮತ್ತು ಆತಿಥ್ಯ ಮನಸೂರೆಗೊಳಿಸಿದೆ. ಇದು ಜೀವಮಾನದಲ್ಲಿ ಮರೆಯಲಾಗದ ಕ್ಷಣ ಎಂದರು.
ಎಸ್‌ಆರ್‌ಎನ್ ಮೆಹತಾ ಸಂಸ್ಥೆ ಮುಖ್ಯಸ್ಥ ಚಕೋರ ಮೆಹತಾ ಅಧ್ಯಕ್ಷತೆ ವಹಿಸಿದ್ದರು. ಶ್ರದ್ಧಾ ಅಮೀತ್, ತ್ರಿಶುಲಾ ಮಾಲಗತ್ತಿ, ಜೈನ ಸಮಾಜದ ಬಾಹುಬಲಿ ಚಿಂದೆ, ಕರ್ನಾಟಕ ಅಲ್ಪಸಂಖ್ಯಾತರ ನಿಗಮದ ನಿಕಟಪೂರ್ವ ನಿರ್ದೇಶಕ ಸುರೇಶ ತಂಗಾ, ಶಾಲೆ ಪ್ರಾಂಶುಪಾಲ ರಾಜಶೇಖರ ರೆಡ್ಡಿ, ಹಿರಿಯರಾದ ಪ್ರಕಾಶ ಜೈನ್, ಶ್ರೀಕಾಂತ ಕಟಂಬಲೆ, ಧನ್ಯಕುಮಾರ ವರ್ಧಮಾನೆ, ಬ್ರಹ್ಮ ಜಗಶೆಟ್ಟಿ, ವಿನೋದ ಪಾಟೀಲ್, ಧರಣೇಂದ್ರ ಸಂಗಮಿ, ಶ್ರೇಣಿಕ ಪಾಟೀಲ್, ಚೇತನ ಪಂಡಿತ್, ರಮೇಶ ಬೆಳಕೇರಿ ಇತರರಿದ್ದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪ್ರೀತಮ್ ಮೆಹತಾ ಸ್ವಾಗತಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಣೆ ಮಾಡಿದರು. ರಾಜೇಂದ್ರ ಕುಣಚಗಿ ವಂದಿಸಿದರು. ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಕಲಬುರಗಿ ಸಮಸ್ತ ಜನರ ಪರವಾಗಿ ಗುರುವಂದನೆ ಸಲ್ಲಿಸಲಾಯಿತು.