ಜಿಲ್ಲೆ

ಶಿಕ್ಷಣ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರ

ಕೊಳ್ಳೇಗಾಲ: ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು 19ನೇ ಶತಮಾನದಲ್ಲಿ ಶಿಕ್ಷಣ ಕಾಂತ್ರಿಯನ್ನೇ ನಡೆಸಿದರು ಎಂದು ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಶತೋತ್ತರ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. 1916ರಲ್ಲಿ ಸಾಕ್ಷರತೆ ಪ್ರಮಾಣ ಕೇವಲ ಶೇ.16 ರಷ್ಟಿತ್ತು. ಶ್ರೀಗಳು ಸಂಸ್ಕಾರಯುತ ಶಿಕ್ಷಣ ನೀಡಬೇಕೆಂಬ ನಿರ್ಧಾರ ಕೈಗೊಂಡು ಬಡವ-ಬಲಿಗ ಎಂಬ ಭೇದ ಎಣಿಸದೆ ಎಲ್ಲರಿಗೂ ಶಿಕ್ಷಣ ನೀಡುವ ಕಾಯಕವನ್ನು ಜೆಎಸ್‌ಎಸ್ ಸಂಸ್ಥೆ ಮೂಲಕ ನೆರವೇರಿಸಿದ್ದಾರೆ. ಇದನ್ನು ನಾವೆಲ್ಲರೂ ಸ್ಮರಿಸಬೇಕು. ನಾಡಿನಲ್ಲಿ ವೀರಶೈವ ಲಿಂಗಾಯತ ಮಠ-ಮಾನ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಮಾಡುವ ಕೆಲಸವನ್ನು ಮಾಡಿದೆ ಎಂದರು.

ಸಂಸ್ಕೃತಿ ಚಿಂತಕ ಶಂಕರ ದೇವನೂರು ಮಾತನಾಡಿ, ವಿದ್ಯಾರ್ಥಿಗಳಿಗೆ ಪರಂಪರೆಗಳ ಬೇರಿನ ಪರಿಚಯ ಅಗಬೇಕಿದೆ. ನಾವೆಲ್ಲರೂ ಸುತ್ತೂರು ಭವ್ಯ ಗುರುಕುಲ ಪರಂಪರೆಯ ಬೆಳಕಿನ ಬಗ್ಗೆ ತಿಳಿಯಬೇಕಿದೆ. ಕಿರಿಯ ವಯಸ್ಸಿನಲ್ಲಿ ಮಠದ ಜವಾಬ್ದಾರಿ ಹೊತ್ತ ಶ್ರೀ ರಾಜೇಂದ್ರ ಸ್ವಾಮೀಜಿ ಅವರು ಕಷ್ಟದ ದಿನಗಳ ನಡುವೆ ಅಕ್ಷರ ದಾಸೋಹ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ತೆರೆಯುತ್ತಾರೆ. ತಿನ್ನುವ ಅನ್ನಕ್ಕೂ ಕಷ್ಟವಿದ್ದಾಗ ಹಳ್ಳಿ-ಹಳ್ಳಿಗಳಲ್ಲಿ ದವಸ-ಧಾನ್ಯವನ್ನು ಬೇಡುತ್ತಾರೆ. ಈ ವೇಳೆ ದವಸ-ಧಾನ್ಯ ಸಿಗದ ಸಂದರ್ಭದಲ್ಲಿ ತಮ್ಮ ಕೊರಳಲ್ಲಿದ್ದ ಚಿನ್ನದ ಕರಡಿಗೆಯನ್ನು ಗಿರಿವಿ ಅಂಗಡಿಗೆ ಮಾರಿ ಹಸಿದ ಮಕ್ಕಳ ಹೊಟ್ಟೆ ತುಂಬಿಸಿದ್ದಾರೆ. ತಾವು ನೊವುಂಡು ಎಲ್ಲರಿಗೂ ಸಂತೋಷ ಕೊಟ್ಟಿದ್ದಾರೆ. ನಮಗೆಲ್ಲ ಸಂಸ್ಕಾರ ಕೊಟ್ಟಿದ್ದಾರೆ. ಅವರ ಆದರ್ಶದಲ್ಲಿ ನಾವೆಲ್ಲರೂ ಬದುಕಬೇಕಿದೆ ಎಂದು ಹೇಳಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಜೆಎಸ್‌ಎಸ್ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ದೇಶ-ವಿದೇಶದಲ್ಲಿ ಜೆಎಸ್‌ಎಸ್ ಸಂಸ್ಥೆ ಸೇವೆ ಒದಗಿಸುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ ಎಂದರು.

ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಮುಖಂಡ ನಿಶಾಂತ್ ಮತ್ತಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ರಾಜೇಂದ್ರ ಸ್ವಾಮೀಜಿ ಭಾವಚಿತ್ರ ಮೆರವಣಿಗೆಗೆ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಚಾಲನೆ ನೀಡಲಾಯಿತು. ವಿವಿಧ ಕಲಾ ತಂಡಗಳೊಂದಿಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ವೀರಶೈವ ಲಿಂಗಾಯತ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಬಸವ ಸಮಿತಿಯ ಮಲ್ಲೇಶಪ್ಪ, ನಂದೀಶ್, ವೀರಭದ್ರಸ್ವಾಮಿ, ಜೆಎಸ್‌ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಕೊಂಗಳಪ್ಪ ಮತ್ತಿತರಿದ್ದರು.