ಜಿಲ್ಲೆ

ಶಿಕ್ಷಣ ಕ್ಷೇತ್ರಕ್ಕೆ ಜೆಎಸ್​ಎಸ್ ಕೊಡುಗೆ ಅಪಾರ

ಧಾರವಾಡ: ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಧಾರವಾಡದ ಶೈಕ್ಷಣಿಕ ನಕಾಶೆಯನ್ನು ಬದಲಿಸಿದ್ದಾರೆ. ಧಾರವಾಡವನ್ನು ಕಾರ್ಯ ಕ್ಷೇತ್ರವನ್ನಾಗಿ ಆಯ್ದುಕೊಂಡು 47 ವರ್ಷಗಳಲ್ಲಿ ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಇವುಗಳಿಗೆಲ್ಲ ಭದ್ರ ಬುನಾದಿ ಹಾಕಿದವರು ಡಾ. ನ. ವಜ್ರಕುಮಾರ. ಶಿಕ್ಷಣ ಕ್ಷೇತ್ರಕ್ಕೆ ಜೆಎಸ್​ಎಸ್ ಕೊಡುಗೆ ಅಪಾರ ಎಂದು ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವ ವಿದ್ಯಾಲಯದ ಸಹಾಯಕ ಉಪ ಕುಲಪತಿ ಜೀವಂಧರ್​ಕುಮಾರ ಹೇಳಿದರು.

ನಗರದ ಜೆಎಸ್​ಎಸ್ ಸಂಸ್ಥೆ 47 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ. ನ. ವಜ್ರಕುಮಾರ ದಂಪತಿಯನ್ನು ಸೋಮವಾರ ಸನ್ಮಾನಿಸಿ ಅವರು ಮಾತನಾಡಿದರು.

ಸಂಸ್ಥೆಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ್ ಮಾತನಾಡಿ, 1973ರ ಆರ್ಥಿಕ ಸಂಕಷ್ಟದ ಸಮಯದಲ್ಲಿ ನ. ವಜ್ರಕುಮಾರರು ಡಾ. ಹೆಗ್ಗಡೆ ಅವರ ಆದೇಶದ ಮೇರೆಗೆ ಧಾರವಾಡಕ್ಕೆ ಬಂದು, 47 ವರ್ಷ ಕಾಲ ಸಂಸ್ಥೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ ಎಂದರು. ಸನ್ಮಾನ ಸ್ವೀಕರಿಸಿ ಡಾ. ನ. ವಜ್ರಕುಮಾರ ಮಾತನಾಡಿ, ಡಾ. ಹೆಗ್ಗಡೆಯವರ ಆಶೀರ್ವಾದ ಹಾಗೂ ಸಿಬ್ಬಂದಿಯ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎಂದರು.

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಡಾ. ಎಸ್.ಕೆ. ಜೋಶಿ, ಡಾ. ಬಲರಾಮ ನಾಯಕ್, ಡಾ. ಡೇವಿಡ್ ಕೋಲಾ, ಡಾ. ವಿಜಿ ಪ್ರಭು, ಡಾ. ಸುನೀಲ ಲೇಖಾ, ಸಿ. ಬಾಬಣ್ಣ, ಇತರರಿದ್ದರು.