ಜಿಲ್ಲೆ

ಶಿಕ್ಷಣ, ಕಾನೂನು ತಿಳಿವಳಿಕೆಯಿಂದ ವಿಮೋಚನೆ

ಚಿತ್ರದುರ್ಗ: ಶಿಕ್ಷಣ, ಕಾನೂನು ತಿಳಿವಳಿಕೆಯಿಂದ ಮಹಿಳೆಯರ ವಿಮೋಚನೆ ಸಾಧ್ಯವಾಗಲಿದೆ ಎಂದು ನಗರ ಪೊಲೀಸ್ ಠಾಣೆ ಪಿಎಸ್‌ಐ ಗೀತಾ ಉಮೇಶ್ ಹೇಳಿದರು.

ನಗರದ ಎಸ್‌ಆರ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಶೋಷಣೆ, ಲಿಂಗ ಅಸಮಾನತೆ, ಅತ್ಯಾಚಾರ, ಬಾಲ್ಯವಿವಾಹ ಮುಂತಾದ ಸಾಮಾಜಿಕ ಪಿಡುಗುಗಳು ಮಹಿಳಾ ಸಬಲೀಕರಣಕ್ಕೆ ಅಡ್ಡಿಯಾಗಿವೆ. ಮಹಿಳಾ ಸಂರಕ್ಷಣಾ ಕಾಯ್ದೆಗಳ ತಿಳಿವಳಿಕೆಯಿಂದ ಸಾಮಾಜಿಕ ಪಿಡುಗುಗಳಿಗೆ ಕಡಿವಾಣ ಹಾಕುವ ಮೂಲಕ ಮಹಿಳೆಯರು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗಲಿದೆ ಎಂದರು.

ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ, ಬಿಇ.ಡಿ ಕಾಲೇಜು ಪ್ರಾಚಾರ್ಯ ಡಾ. ಟಿ.ಎಸ್. ರವಿ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‌ಐ ನಾಗರಾಜ್ ಇದ್ದರು. ಪ್ರಶಿಕ್ಷಣಾರ್ಥಿ ಬಸವರಾಜ ಗೋಡಿ ನಿರೂಪಿಸಿದರು. ಸಿಂಧೂ ಸ್ವಾಗತಿಸಿ, ಅನ್ನಪೂರ್ಣ ವಂದಿಸಿದರು.