ಜಿಲ್ಲೆ

ಶಿಕ್ಷಣ ಎಂದರೆ ಕೇವಲ ಅಂಕಗಳಿಸುವುದಲ್ಲ: ಸ್ವಾಮಿ ಮುಕ್ತಿದಾನಂದ ಅಭಿಮತ

ಮೈಸೂರು: ಶಿಕ್ಷಣ ಎಂದರೆ ಕೇವಲ ಅಂಕಗಳ ಹಿಂದೆ ಬೀಳುವುದಲ್ಲ. ಮೌಲ್ಯ, ಜ್ಞಾನವನ್ನು ವೃದ್ಧಿವುದೇ ನಿಜವಾದ ಶಿಕ್ಷಣ ಎಂದು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದ ಅಭಿಪ್ರಾಯಪಟ್ಟರು.
ರೋಟರಿ ಮೈಸೂರು ಮಿಡ್‌ಟೌನ್‌ನಿಂದ ನಗರದ ರೋಟರಿ ಕೇಂದ್ರ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ, ಪಿಯುಸಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಟ್ರಿನಿಟಿ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್ ನೀಡಿ ಮಾತನಾಡಿದರು.
ವಿದ್ಯೆ ಪರಿಶ್ರಮದಿಂದ ಒಲಿಯುತ್ತದೆಯೇ ಹೊರತು ಅದಕ್ಕೆ ಯಾವುದೇ ಅನ್ಯ ಮಾರ್ಗ ಇಲ್ಲ. ಆದರೆ ಇತ್ತೀಚೆಗೆ ಅಂಕ ಗಳಿಸುವುದೇ ಶಿಕ್ಷಣ ಎನ್ನುವ ಸ್ಥಿತಿ ಬಂದಿದೆ. ಅಂಕಗಳ ಹಿಂದೆ ಬೀಳವುದು ವಿದ್ಯೆ ಅಲ್ಲ. ನಿಜವಾಗಿ ಜ್ಞಾನವನ್ನು ಕೊಡುವುದೇ ವಿದ್ಯೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಬೇಕಾದರೆ ಸೂಕ್ತ ಪ್ರೋತ್ಸಾಹ ಅಗತ್ಯ. ಗಿಡಗಳಿಗೆ ಸರಿಯಾದ ಆರೈಕೆ ಇಲ್ಲದಿದ್ದರೆ ಹೇಗೆ ಸೊರಗುತ್ತವೆಯೋ ಹಾಗೆಯೇ ವಿದ್ಯಾರ್ಥಿಗಳಿಗೆ ಸರಿಯಾದ ಪ್ರೋತ್ಸಾಹ ದೊರೆಯದಿದ್ದರೆ ಅವರ ಪ್ರತಿಭೆ ಕಮರುತ್ತದೆ. ಆದ್ದರಿಂದ ಯಾವುದರಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಹೋಗಲು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಅರ್ಹತೆ ತಾನಾಗೇ ಉತ್ಪತ್ತಿಯಾಗುವುದಲ್ಲ. ಕಠಿಣ ಸಾಧನೆಯಲ್ಲಿ ಸಾಗಿದ ವ್ಯಕ್ತಿ ಅದನ್ನು ಪಡೆಯಬಲ್ಲ. ನಿಖರತೆ ಮತ್ತು ಶ್ರದ್ಧೆ ಅರ್ಹತೆಯನ್ನು ಪಡೆಯಲು ಇರುವ ದಾರಿ. ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಜ್ಞಾನವೊಂದೆ ಅತ್ಯಂತ ಅಮೂಲ್ಯ ಹಾಗೂ ಅದರಿಂದಲೇ ಅರ್ಹತೆ ಸೃಷ್ಟಿಯಾಗುತ್ತದೆ ಎಂದರು.
ಪ್ರಶಸ್ತಿ ಪುರಸ್ಕೃತರಾದ ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 621 ಅಂಕ ಪಡೆದ ಯರಗನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಎಸ್.ಅಜಯ್ ಮಾತನಾಡಿ, ಸಾಧನೆ ಸಾಧಿಸಲು ವಿದ್ಯಾರ್ಥಿಗಳಿಗೆ ಶಾರದೆ ಸಾರಥಿ ಅಗಬೇಕು. ಶಾಲೆಯಲ್ಲಿ ಹೇಳಿಕೊಟ್ಟಿದ್ದನ್ನು ಮನನ ಮಾಡಿಕೊಳ್ಳಬೇಕು. ನಿರಂತರ ಅಭ್ಯಾಸ ಅತಿ ಮುಖ್ಯ. ಸಾಧಿಸಬೇಕು ಎನ್ನುವ ಛಲವನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡಬೇಕು. ಆಗ ಅಂದುಕೊಂಡ ಗುರಿಮುಟ್ಟಲು ಸಾಧ್ಯ. ನಮ್ಮ ಶಿಕ್ಷಕರು, ಪೋಷಕರು, ಸ್ನೇಹಿತರ ಸಹಕಾರ, ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು ಎಂದು ಅಭಿಪ್ರಾಯ ಹಂಚಿಕೊಂಡರು.
ಪ್ರಶಸ್ತಿ ಪಡೆದ ಬೇಸ್ ಪಿಯು ಕಾಲೇಜಿನ ರೋಹಿತ್ ಕಲ್ಯಾಣಪುರ್ ಮಾತನಾಡಿ, ಪರೀಕ್ಷೆ ಬಂದಾಗ ಸಿದ್ಧತೆ ಮಾಡಿದರೆ ಅಂದುಕೊಂಡಷ್ಟು ಅಂಕ ಗಳಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೊದಲಿನಿಂದಲೂ ಅಭ್ಯಾಸದಲ್ಲಿ ತೊಡಗಬೇಕು ಎಂದು ಹೇಳಿದರು.
ರೋಟರಿ ಮೈಸೂರು ಮಿಡ್‌ಟೌನ್ ಅಧ್ಯಕ್ಷ ಎಂ.ಎಸ್.ನವೀನ್‌ಚಂದ್ರ, ಕಾರ್ಯದರ್ಶಿ ಎಸ್.ಕುಮಾರಸ್ವಾಮಿ, ಟ್ರಿನಿಟಿ ಗ್ರೂಪ್ ಆಫ್ ಇನ್ಸಿಟಿಟ್ಯೂಷನ್ಸ್ ಅಧ್ಯಕ್ಷ ಎಲಿಝರ್ ಮಿಲ್ಟನ್, ಟ್ರಿನಿಟಿ ಕಾಲೇಜಿನ ಪ್ರಾಂಶುಪಾಲ ಡಾ.ಶಾಮಾ ಇ. ಮಿಲ್ಟನ್ ಇದ್ದರು.