ನುಗ್ಗೇಹಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ತಾಲೂಕು ಶಿಕ್ಷಣ ಇಲಾಖೆಗೆ ಒಂದು ಪೈಸೆ ಅನುದಾನ ನೀಡಿಲ್ಲ. ಇದರಿಂದ ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಕಷ್ಟವಾಗುತ್ತದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.
ಹೋಬಳಿಯ ಕೆಪಿಎಸ್ ಶಾಲಾ ಅವರಣದಲ್ಲಿ ಮಂಗಳವಾರ ತಾಲೂಕು ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ನುಗ್ಗೇಹಳ್ಳಿ ಹೋಬಳಿ ಮಟ್ಟದ 14 ವರ್ಷದೊಳಗಿನ ಶಾಲಾ ಮಕ್ಕಳ 2025-26ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಗೆ ಅನುದಾನ ಬಿಡುಗಡೆ ಮಾಡಲು ಆಸಕ್ತಿ ತೋರುತ್ತಿಲ್ಲ. ಇದರಿಂದ ತಾಲೂಕಿನಲ್ಲಿ ಶಾಲಾ ಕಟ್ಟಡಗಳ ದುರಸ್ತಿ ಸೇರಿದಂತೆ ಶಾಲೆಗಳ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ.ಸಿ.ನಾಗೇಶ್ ಅವರು ತಾಲೂಕಿಗೆ ವಿವೇಕ ಯೋಜನೆಯಡಿ ಸುಮಾರು 20ಕ್ಕೂ ಹೆಚ್ಚು ಹೊಸ ಕಟ್ಟಡಗಳನ್ನು ಮಂಜೂರು ಮಾಡಿದ್ದರು. ಆದರೆ, ಈ ಸರ್ಕಾರದ ಅವಧಿಯಲ್ಲಿ ಒಂದು ಕಟ್ಟಡವು ಮಂಜೂರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕ್ರೀಡೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಕ್ರೀಡಾ ಇಲಾಖೆಗೆ ವಾರ್ಷಿಕ ಕನಿಷ್ಠ 250 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ. ಈ ಅನುದಾನದಲ್ಲಿ ಆಟದ ಮೈದಾನಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಬಹುದು. ಈ ಬಗ್ಗೆ ಸರ್ಕಾರ ಗಮನಹರಿಸಲಿ. ತಾಲೂಕಿನಲ್ಲಿ ಅನೇಕ ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಆದರೆ, ಬೋಧಕ ಶಿಕ್ಷಕರ ಸಹಕಾರದಿಂದ ಮಕ್ಕಳಿಗೆ ತರಬೇತಿ ನೀಡಿ ಕ್ರೀಡಾಕೂಟಗಳಲ್ಲಿ ಮಕ್ಕಳು ಭಾಗವಹಿಸುವಂತೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೇವಲ ಗೆಲುವನ್ನೇ ಮಾನದಂಡವಾಗಿ ಇಟ್ಟುಕೊಂಡು ಸ್ಪರ್ಧೆ ಮಾಡಬಾರದು. ಮಕ್ಕಳಲ್ಲಿ ಆತ್ಮವಿಶ್ವಾಸ ಮುಖ್ಯ. ತಾಲೂಕಿನ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡರೆ ಅಂತಹ ಮಕ್ಕಳಿಗೆ ತಾಲೂಕು ಆಡಳಿತದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಶಿಕ್ಷಣದ ಜತೆಗೆ ಮಕ್ಕಳಿಗೆ ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸುವಂತೆ ಶಿಕ್ಷಕರು, ಪಾಲಕರು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರ ಜತೆಗೆ ಈಗಾಗಲೇ 2 ಕೋಟಿ ರೂ.ವೆಚ್ಚದಡಿ ವಿವಿಧ ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದ್ದು ಕೊಠಡಿಯ ಕೊರತೆ ಉಂಟಾಗಿಲ್ಲ. ಹೋಬಳಿ ಕೇಂದ್ರ ಸ್ವಾತಂತ್ರೃ ಪೂರ್ವದಿಂದಲೂ ರಾಜ್ಯದಲ್ಲೇ ವಾಲಿಬಾಲ್ ಆಟದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದೆ. ರಾಜಕೀಯ, ಶೈಕ್ಷಣಿಕವಾಗಿ ಹೋಬಳಿ ಕೇಂದ್ರ ತನ್ನದೇ ಆದ ಇತಿಹಾಸ ಹೊಂದಿದೆ ಎಂದು ಪ್ರಶಂಸಿಸಿದರು.
ಪುರವರ್ಗ ಹಿರೇ ಮಠದ ಡಾ.ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ದೊರೆಸ್ವಾಮಿ ಚಾಲನೆ ನೀಡಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆನಂದ್, ಹೋಬಳಿ ಶಿಕ್ಷಣ ಸಂಯೋಜಕ ಕರಿಯಪ್ಪ ಗೌಡ, ಗ್ರಾಪಂ ಅಧ್ಯಕ್ಷ ಶಿವಕುಮಾರ್, ಕೆಪಿಎಸ್ ಪ್ರಾಂಶುಪಾಲ ಸ್ವಾಮಿ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹುಲಿಕೆರೆ ಸಂಪತ್ ಕುಮಾರ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್.ರವಿ, ಬಿಆರ್‌ಪಿ ಶ್ರೀಕಾಂತ್, ಸಿಆರ್‌ಪಿ ಸಂಘದ ಅಧ್ಯಕ್ಷ ಎಚ್.ಟಿ.ಮಂಜೇಗೌಡ, ಸಿಆರ್‌ಪಿಗಳಾದ ಅಶೋಕ್ ಸುಂದರ್, ಗಂಗಾಧರ್, ಪದ್ಮಮ್ಮ, ಮಮತಾ, ಶಿಕ್ಷಕರ ಸಂಘದ ಕಾರ್ಯದರ್ಶಿ ಗಾಯತ್ರಿ, ಉದ್ಯಮಿ ಜಗದೀಶ್, ಪುಟ್ಟಸ್ವಾಮಿ, ಮಹಮ್ಮದ್ ಜಾವೀದ್, ರಾಜಣ್ಣ, ಪ್ರಕಾಶ್, ಹೊನ್ನೇಗೌಡ, ನಟರಾಜ್, ಮಂಜುನಾಥ್, ನಾಗೇಶ್, ಶ್ರೀ ಸ್ವಾಮಿ ವಿವೇಕಾನಂದ ಸಂಸ್ಥೆ ಕಾರ್ಯದರ್ಶಿ ಅಭಿಲಾಷ್, ಜಿಂಗಲ್ ಬೆಲ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸತ್ಯವೇಲು, ಗೋಕುಲ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ಪೃಥ್ವಿ ಯಾದವ್ ಪಾಲ್ಗೊಂಡಿದ್ದರು.