ಜಿಲ್ಲೆ

ಶಿಕ್ಷಣ ಇಲಾಖೆ ಅಧಿಕಾರಿಗಳು ಲೋಕಾ ಬಲೆಗೆ

ಕಲಬುರಗಿ: ನಿವೃತ್ತ ಶಿಕ್ಷಕಿಯ ಪಿಂಚಣಿ ಹಣ ಸೆಟಲ್‌ಮೆಂಟ್‌ಗಾಗಿ ಲಂಚದ ಬೇಡಿಕೆ ಇಟ್ಟಿದ್ದ ಬಿಇಒ ಪರ ಲಂಚ ಪಡೆದ ಮಧ್ಯವರ್ತಿ ರಾಧಾಕೃಷ್ಣ ಎಂಬಾತ ಮತ್ತು ಎಸ್ಸೆಸ್ಸೆಲ್ಸಿ ಬೋರ್ಡ್ನಲ್ಲಿ ಡುಬ್ಲಿಕೇಟ್ ಮಾರ್ಕ್ಸ್ ಕಾರ್ಡ್ ನೀಡಲು ಲಂಚ ಪಡೆದ ಎಫ್‌ಡಿಎ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ ರಾಠೋಡ್‌ನು ನಿವೃತ್ತ ಶಿಕ್ಷಕಿಯ ಪೆನ್ಶನ್ ಸೆಟ್‌ಲ್‌ಮೆಂಟ್‌ಗಾಗಿ ಐವತ್ತು ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಇದಕ್ಕೆ ಶಿಕ್ಷಕಿಯ ಪತಿ ಯಶವಂತ ಬಿರಾದಾರ ೫೦ ಸಾವಿರ ರೂ. ನೀಡಲು ಒಪ್ಪಿದ್ದ. ಹಣ ಪಡೆಯಲು ಬಿಇಒ ಹಣಮಂತ ರಾಠೋಡ್‌ನ ಮಧ್ಯವರ್ತಿ ಶಿಕ್ಷಣ ಇಲಾಖೆ ಸಿಬ್ಬಂದಿ ರಾಧಾಕೃಷ್ಣ ನಗರದ ಶರಣಬಸವೇಶ್ವರ ದೇವಸ್ಥಾನ ಬಳಿ ಶುಕ್ರವಾರ ಬಂದಿದ್ದು, ಹಣ ನೀಡುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರು ಬಲೆ ಬೀಸಿ, ವಿಚಾರಣೆ ನಡೆಸಿದ್ದಾರೆ.
ಮಧ್ಯವರ್ತಿ ರಾಧಾಕೃಷ್ಣ ಮೂಲಕ ಬಿಇಒ ಹಣಮಂತ ರಾಠೋಡ್‌ಗೆ ಹಣ ತಲುಪುತ್ತಿರುವುದು ಲೋಕಾಯುಕ್ತರು ಖಚಿತ ಪಡಿಸಿಕೊಂಡಿದ್ದಾರೆ. ಈ ಮಾಹಿತಿ ಅರಿತ ಬಿಇಒ ಹಣಮಂತ ನಾಪತ್ತೆಯಾಗಿದ್ದು, ಶನಿವಾರವೂ ಪತ್ತೆಯಾಗಿಲ್ಲ. ಲೋಕಾಯುಕ್ತ ಎಸ್ಪಿ ಆ್ಯಂಟನಿ, ಡಿವೈಎಸ್ಪಿ ಗೀತಾ ಹಾಗೂ ರಾಜಶೇಖರ ಹಳಿಗೋದಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ಡುಬ್ಲಿಕೇಟ್ ಮಾರ್ಕ್ಸ್ ಕಾರ್ಡ್ಗಾಗಿ ಲಂಚ: ಕಲಬುರಗಿ ನಗರದ ಐವಾನ್ ಇ ಶಾಹಿ ಪ್ರದೇಶದಲ್ಲಿನ ಪ್ರಾದೇಶಿಕ ಶಿಕ್ಷಣ ಆಯುಕ್ತ ಕಚೇರಿ ಆವರಣದಲ್ಲಿರುವ ಎಸ್ಸೆಸ್ಸೆಲ್ಸಿ ಬೋರ್ಡ್ನ ಕಚೇರಿಯಲ್ಲಿ ನಕಲು ಅಂಕ ಪಟ್ಟಿ ಮುದ್ರಿಸಲು ಲಂಚ ಪಡೆದ ಎಫ್‌ಡಿಎ ಅಧಿಕಾರಿ ಶಿವಶಂಕರಯ್ಯ ಮತ್ತು ಆತನಿಗೆ ಸಹಕರಿಸಿದ ಎಫ್‌ಡಿಎ ಜಟಿಂಗರಾಯ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಎಸ್ಸೆಸ್ಸೆಲ್ಸಿ ಬೋರ್ಡ್ನ ಕಚೇರಿಯಲ್ಲಿ ಬೀದರ್ ಜಿಲ್ಲೆಯನ್ನು ನಿರ್ವಹಣೆ ಮಾಡುತ್ತಿದ್ದ ಶಿವಶಂಕರಯ್ಯ ನಕಲು ಅಂಕ ಪಟ್ಟಿ ನೀಡಲು ಅರುಣ ಹತ್ತೀಬ್ ಬಳಿ ಡುಬ್ಲಿಕೇಟ್ ಮಾರ್ಕ್ಸ್ ಕಾರ್ಡ್ ನೀಡಲು ೭೫೦ ರೂ. ಸರ್ಕಾರಿ ಫೀಸ್ ಇದ್ದು, ಐದು ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಮೇ ೧೭ರಂದು ಮೂರು ಸಾವಿರ ರೂ. ಫೋನ್ ಪೇ ಮಾಡಿಸಿಕೊಂಡಿದ್ದಾನೆ. ಬಾಕಿ ಉಳಿದ ಎರಡು ಸಾವಿರ ರೂ.ವನ್ನು ಶನಿವಾರ ಬೆಳಗ್ಗೆ ಕಚೇರಿಯಲ್ಲಿ ಪಡೆಯುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಶಿವಶಂಕರಯ್ಯನ್ನು ಬಲೆಗೆ ಬೀಳಿಸಿದ್ದಾರೆ.
ಲೋಕಾಯುಕ್ತ ಡಿಎಸ್‌ಪಿ ಮಂಜುನಾಥ ಗಂಗಲ್, ಅಕ್ಕಮಹಾದೇವಿ, ಸಿಬ್ಬಂದಿ ಯಮನೂರಪ್ಪ, ಪ್ರದೀಪ, ರಾಣೋಜಿ, ಶಾಮನೂರ ಸೇರಿ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.