ಸಾಗರದ ಸರ್ಕಾರಿ ಉರ್ದು ಪ್ರೌಢಶಾಲೆ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಸಾಗರ ಶ್ರೀಗಂಧದ ವತಿಯಿಂದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸವಿತಾ ಮಹಾಬಲೇಶ್, ಸರಸ್ವತಿ ನಾಗರಾಜ್, ಎಸ್.ಆರ್.ವಿನಯ್ ಇತರರಿದ್ದರು. 
ಜಿಲ್ಲೆ

ಶಿಕ್ಷಕರು ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳು

ಸಾಗರ: ಶಿಕ್ಷಕರು ಸಂಸ್ಕಾರ, ಸಮರ್ಥ ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳು. ಬದುಕನ್ನು ವ್ಯವಸ್ಥಿತವಾಗಿ ಮುನ್ನಡೆಸಲು ಶಿಕ್ಷಕರ ಮಾರ್ಗದರ್ಶನ ಬಹಳ ಮುಖ್ಯ ಎಂದು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಕೆ.ಬಿ.ಮಹಾಬಲೇಶ್ ತಿಳಿಸಿದರು.

ಸಾಗರದ ಸರ್ಕಾರಿ ಉರ್ದು ಪ್ರೌಢಶಾಲೆ ಸಭಾಂಗಣದಲ್ಲಿ ಶನಿವಾರ ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮನೆಯೇ ಮೊದಲ ಪಾಠಶಾಲೆಯಾದರೂ ಶಾಲೆ ಮತ್ತು ಶಿಕ್ಷಕರ ಪ್ರಭಾವ ಮಕ್ಕಳ ಮೇಲೆ ನಿರಂತರವಾಗಿ ಇರುತ್ತದೆ. ಮಕ್ಕಳನ್ನು ತಿದ್ದಿ, ಬುದ್ಧಿ ಕಲಿಸುವಲ್ಲಿ ಶಿಕ್ಷಕರ ಪರಿಶ್ರಮ ವಿಶೇಷವಾದುದು. ಲಯನ್ಸ್ ಶ್ರೀಗಂಧ ಸಂಸ್ಥೆ ಶಿಕ್ಷಣಸೇವೆ ಮಾಡುತ್ತಿರುವ ಶಿಕ್ಷಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಶ್ರೇಷ್ಠ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷೆ ಸರಸ್ವತಿ ನಾಗರಾಜ್ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸುವುದು ಸುಸಂಸ್ಕೃತ ಸಮಾಜದ ಕೆಲಸ. ಮಕ್ಕಳಿಗೆ ಶಿಕ್ಷಕರ ಪ್ರಾಮುಖ್ಯತೆ, ಅಕ್ಷರಜ್ಞಾನದ ಮಹತ್ವ ತಿಳಿಸುವುದು ಹೆಚ್ಚಿನ ಅಗತ್ಯ ಎಂದರು.

ಮುಖ್ಯ ಶಿಕ್ಷಕ ದತ್ತಾತ್ರೇಯ ಭಟ್, ಉಪನ್ಯಾಸಕಿ ಸವಿತಾ ಮಹಾಬಲೇಶ್, ಮಂಗಳಗೌರಿ, ವೀಣಾ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ವಲಯ ಅಧ್ಯಕ್ಷ ಎನ್.ಆರ್.ವಿನಯ, ಬಿ.ಎಸ್.ಎಸ್.ಮೂರ್ತಿ, ಸಹನಾ ವಿನಯ್, ಗುರುಪ್ರಸಾದ್, ಚಂದ್ರಪ್ಪ, ಅಕ್ಷಯ, ರಜನಿ ರವೀಶ್, ಪೂರ್ಣಿಮಾ, ಶಾಂತಮೂರ್ತಿ, ಶೈಲೇಶ್, ಮೇಜರ್, ನಾಗರಾಜ್ ಇತರರಿದ್ದರು.