ಗುಂಡ್ಲುಪೇಟೆ: ಸಮಾಜದಲ್ಲಿ ಶಿಕ್ಷಕರಿಗೆ ತನ್ನದೇ ಆದ ಉನ್ನತ ಸ್ಥಾನವಿದ್ದು, ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ನಿವೃತ್ತ ಉಪನ್ಯಾಸಕ ಡಿ.ಎಸ್. ಸದಾಶಿವಮೂರ್ತಿ ಹೇಳಿದರು.
ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕರಿಗೆ ಉದ್ಯೋಗ ಹಾಗೂ ಸಮಾಜದಲ್ಲಿ ತಮ್ಮದೇ ಆದ ಸಮಸ್ಯೆ ಹಾಗೂ ಸವಾಲುಗಳಿವೆ. ರಾಷ್ಟ್ರ ನಿರ್ಮಾತೃವಾದ ಶಿಕ್ಷಕರು ದೇಶದ ಅಭಿವೃದ್ಧಿಗೆ ಮೂಲಾಧಾರವಾಗಿದ್ದು ಅತ್ಯುತ್ತಮ ಮೆದುಳಾಗಿ ಕೆಲಸ ಮಾಡಬೇಕು ಎಂದರು.
ಶಾಸಕ ಸಿ.ಎಸ್. ನಿರಂಜನಕುಮಾರ್ ಮಾತನಾಡಿ, ಶಿಕ್ಷಕರಿಗೆ ನಿವೃತ್ತಿಯ ನಂತರೂ ಸಾರ್ಥಕತೆ ಭಾವ ಬರುತ್ತದೆ. ಡಾಕ್ಟರ್, ಇಂಜಿನಿಯರ್, ವಿಜ್ಞಾನಿ, ಮಂತ್ರಿ, ಮುಖ್ಯಮಂತ್ರಿ ಎಲ್ಲರೂ ಶಿಕ್ಷಕರಿಂದಲೇ ವಿದ್ಯೆ ಕಲಿತವರಾಗಿದ್ದು, ಎಲ್ಲರಿಂದಲೂ ಶಿಕ್ಷಕರಿಗೆ ಗೌರವ ಸಮರ್ಪಣೆಯಾಗುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕ್ರಮಕೈಗೊಂಡಿವೆ. ಸರ್ಕಾರ ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಮತ್ತು ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಕ್ಯಾನ್ಸರ್, ಕಣ್ಣು, ಕಿವಿ, ಮೂಗು, ಗಂಟಲು, ಬಾಯಿ ಹಾಗೂ ಇಸಿಜಿ ಮುಂತಾದ ಸಾಮಾನ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ, ತಹಸೀಲ್ದಾರ್ ರವಿಶಂಕರ್, ತಾಪಂ ಇಒ ಅರಸು, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಬಗರ್ ಹುಕುಂ ಸಮಿತಿಯ ಉಪಾಧ್ಯಕ್ಷ ನಿಟ್ರೆ ನಾಗರಾಜಪ್ಪ ಹಾಗೂ ಇತರರು ಇದ್ದರು.