ಜಿಲ್ಲೆ

ಶಿಕ್ಷಕರಿಗೆ ರೋಟರಿ ಪ್ರಶಸ್ತಿ ಪ್ರದಾನ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ಹಲವು ಸೇವಾ ಕಾರ್ಯಗಳ ಮೂಲಕ ರೋಟರಿ ಸಂಸ್ಥೆಯು ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಚಾಮರಾಜನಗರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷೆ ಎನ್.ನೇತ್ರಾವತಿ ಹೇಳಿದರು.

ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಹಾಗೂ ರೋಟರಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರೋಟರಿ ಸಂಸ್ಥೆಯು ಶಿಕ್ಷಣ, ಆರೋಗ್ಯ, ಪೋಲಿಯೋ ನಿರ್ಮೂಲನೆ, ಸ್ವಚ್ಛತಾ ಅಭಿಯಾನ, ಸ್ಥಳೀಯ ಸಮುದಾಯಗಳ ಅಗತ್ಯಗಳನ್ನು ಪೂರೈಸುವಂತಹ ವಿವಿಧ ಸೇವಾ ಯೋಜನೆಗಳ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ಅಲ್ಲದೆ ಶಿಕ್ಷಕರ ಸೇವೆ ಗುರುತಿಸಿ ಶಿಕ್ಷಕರಿಗೆ ರೋಟರಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾತ್ರವಲ್ಲದೇ ಅವರ ವ್ಯಕ್ತಿತ್ವ ರೂಪಿಸುವ ಮಹತ್ವದ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸುತ್ತಾರೆ. ಡಾ.ಎಸ್.ರಾಧಾಕೃಷ್ಣನ್ ಅವರ ವಿಚಾರ ಸಂಪನ್ನತೆ, ಸಾವಿತ್ರಿಬಾಯಿ ಫುಲೆ ಅವರ ತ್ಯಾಗಮಯ ಸೇವೆ ಶಿಕ್ಷಣ ಕ್ಷೇತ್ರಕ್ಕೆ ಸದಾ ದಾರಿದೀಪವಾಗಿದೆ ಎಂದರು.

ಶಿಕ್ಷಕಿಯರಾದ ಸಿಂಧೂರಿ ಮಹೇಶ್ವರಿ, ರೇವಮ್ಮ, ಹಸೀನಾಬಾನು, ಪುಷ್ಪಲತಾ, ಸೌಮ್ಯಲತಾ, ಶಿಕ್ಷಕ ಕಿಶೋರ್ ಅವರಿಗೆ ರೋಟರಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಾಜೀವ್, ರೋಟರಿ ಸದಸ್ಯ ಸಿದ್ದಮಲ್ಲಪ್ಪ, ಕಾರ್ಯದರ್ಶಿ ಸಿದ್ದರಾಜು, ಡಾ.ನಾಗಾರ್ಜುನ, ರೋಟರಿ ಸಂಸ್ಥಾಪಕ ಸದಸ್ಯರಾದ ಜಿ.ಆರ್.ಅಶ್ವತ್ಥ್ ನಾರಾಯಣ್, ಸಿ.ವಿ.ಶ್ರೀನಿವಾಸ ಶೆಟ್ಟಿ, ಕಾಳನಹುಂಡಿ ಗುರುಸ್ವಾಮಿ, ಸದಸ್ಯ ನೇಮಿರಾಜ್, ಭವಾನಿದೇವಿ, ಮಹಾದೇವಸ್ವಾಮಿ ಇನ್ನಿತರರಿದ್ದರು.