ಹನಗೋಡು: ವಿದ್ಯೆ ಕಲಿಸಿದ ಶಿಕ್ಷಕರನ್ನು ಸ್ಮರಿಸುವ ದಿನಗಳು ದೂರವಾಗುತ್ತಿರುವ ಈ ದಿನಮಾನಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಗುರುಗಳ ಸ್ಮರಣೆಗೆ ಒತ್ತು ನೀಡಿ ಗುರುವಂದನೆ ಸಲ್ಲಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹುಣಸೂರು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಎಲ್.ರಾಜೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಹನಗೋಡು ಸರ್ಕಾರಿ ಪ್ರೌಢಶಾಲೆಯ 1994-95ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಗುರುಶಿಷ್ಯರ ಮಹಾಸಂಗಮ ಕಾರ್ಯಕ್ರಮವನ್ನು ಸೂಮವಾರದಂದು ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆ ಬೆಳೆದಂತೆ ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿರುವ ಕಾಲಘಟದಲ್ಲಿ ನಾವಿದ್ದೇವೆ. ಈ ಹಂತದಲ್ಲಿ ಹಳೇ ವಿದ್ಯಾರ್ಥಿಗಳು 30 ವರ್ಷದ ಬಳಿಕ ಒಗ್ಗೂಡಿ ಪಾಠ ಕಲಿಸಿದ ಶಿಕ್ಷಕರನ್ನು ಗೌರವಿಸುವ ಮಹತ್ ಕಾರ್ಯ ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದರು.
ಭಾರತೀಯ ಸಂಸ್ಕೃತಿ ಸಂಪ್ರದಾಯದಲ್ಲಿ ಅಕ್ಷರ ಕಲಿಸಿದವರನ್ನು ಜೀವನದಲ್ಲಿ ಸ್ಮರಿಸುವ ಪದ್ಧತಿ ಇದ್ದು, ಆ ಪದ್ಧತಿಗೆ ಇಂದಿನ ಸಮಾರಂಭ ಹೋಲಿಕೆಯಾಗುತ್ತಿದೆ. ಅಕ್ಷರ ಕಲಿಸಿದವರನ್ನು ಮರೆತರೆ ಸಂಸ್ಕೃತಿಯನ್ನೇ ಮರೆತಂತೆ. ಓದುವ ಹಂತದಲ್ಲಿ ಶಿಕ್ಷಕರು ವಿದ್ಯಾರ್ಥಿಯ ಭವಿಷ್ಯದ ಕಾಳಜಿಯಲ್ಲಿ ಶಿಕ್ಷಿಸಿದ್ದರೂ ಆ ಶಿಕ್ಷೆ ವೈಯಕ್ತಿಕವಾಗಿರಲಿಲ್ಲ. ಹೀಗಾಗಿ ಅಂದು ದಂಡನೆಗೆ ಗುರಿಯಾದವರು ಇಂದು ಉತ್ತಮ ಸ್ಥಾನದಲ್ಲಿದ್ದಾರೆ ಎಂದರು.
ಚಾಮರಾಜನಗರ ಜಿಲ್ಲೆ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಬಿ.ಪಿ.ಗಿರೀಶ್ ಮಾತನಾಡಿ, ಪ್ರಾಥಮಿಕ ಶಿಕ್ಷಣದಲ್ಲಿ ಅಕ್ಷರ ಕಲಿಸಿದ ಗುರುಗಳನ್ನು ವಿದ್ಯಾರ್ಥಿಗಳು ಜೀವಿತಾವಧಿಯಲ್ಲಿ ಸ್ಮರಿಸಿಕೊಳ್ಳುವ ಸಂಸ್ಕೃತಿ ಉಳಿದಿದೆ ಎನ್ನಲು ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಗುರುವಂದನಾ ಹೆಸರಿನಲ್ಲಿ ಸ್ನೇಹಿತರ ಸಮಾಗಮ ಮತ್ತು ಅನುಭವ ವಿನಿಮಯ ಸಂತೋಷ ಸಿಕ್ಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಸಂತೋಷ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳು ಅನುಭವ ವಿನಿಮಯ ಮಾಡಿಕೊಂಡರು.
ಗುರುಗಳಾದ ಎಸ್.ಆರ್.ಕರೀಗೌಡ, ಜಿ.ಎನ್.ಶ್ರೀನಿವಾಸಮೂರ್ತಿ, ಸಿದ್ದರಾಮಯ್ಯ, ಚಂದ್ರಶೇಖರ್, ಕಪನಯ್ಯ, ಉಮಾ, ದಾಕ್ಷಾಯಿಣಿ, ಶೈಲಜಾ ಮಹದೇವ್, ಹರಿಣಾಕ್ಷಿ, ಶ್ರೀನಿವಾಸ್, ಸುರೇಶ್, ಚಂದ್ರಪ್ಪ, ಗೀತಾ ವೆಂಕಟಪ್ಪ, ಹಳೆಯ ವಿದ್ಯಾರ್ಥಿಗಳಾದ ದಾ.ರಾ.ಮಹೇಶ್, ಇಮ್ತಿಯಾಜ್, ಪಿ.ಕುಮಾರ್, ಕೆ.ವಿ.ರಮೇಶ್, ನಾಗೇಗೌಡ ಅಜೀಮಾ, ಮಹದೇವ, ಸೋಮಣ್ಣ, ಪ್ರಸನ್ನ, ಮಹೇಶ್, ಸವಿತಾ, ದಾಕ್ಷಾಯಿಣಿ, ಪೊನ್ನಪ್ಪ, ಮಂಜುಳಾ, ಪ್ರಕಾಶ್, ಬೈರೇಗೌಡ, ಪೊನ್ನಪ್ಪ, ಶಿವಶಂಕರ್, ವಸಂತ, ಸುನಂದ ಸೇರಿದಂತೆ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.