ಮದ್ದೂರು: ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಪ್ರಸ್ತುತ ಸನ್ನಿವೇಶದಲ್ಲಿ ದಿಕ್ಕು ತಪ್ಪುತ್ತಿರುವ ಯುವ ಸಮಾಜವನ್ನು ಸರಿದಾರಿಗೆ ತರುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಮೈಸೂರಿನ ಕ್ರೆಡಿಟ್ ಐ ಸಂಸ್ಥೆಯ ಸಿಇಒ ಡಾ. ಎಂ.ಪಿ.ವರ್ಷ ಹೇಳಿದರು.
ಪಟ್ಟಣದ ರೋಟರಿ ಕಚೇರಿಯಲ್ಲಿ ಶನಿವಾರ ಮದ್ದೂರು ರೋಟರಿ ಸಂಸ್ಥೆ ಏರ್ಪಡಿಸಿದ್ದ ಸಂಸ್ಥೆಯ 43ನೇ ವಾರ್ಷಿಕೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2040ರ ವೇಳೆಗೆ ವಿಶ್ವದ ಆರ್ಥಿಕತೆಯಲ್ಲಿ ಭಾರತ ಅಮೆರಿಕವನ್ನು ಮೀರಿಸುವ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಹಾಗೂ ಶಿಕ್ಷಕರ ಪಾತ್ರ ಬಹಳ ಮಹತ್ತರವಾಗಿದೆ ಎಂದು ಹೇಳಿದರು.
ಸಂಸ್ಥೆಯ ಮಾಜಿ ಅಧ್ಯಕ್ಷ ರೊ. ಬಿ.ಡಿ. ಹೊನ್ನೇಗೌಡ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆ 118 ವರ್ಷಗಳಿಂದ ಸೇವೆಯಲ್ಲಿ ತೊಡಗಿಸಿಕೊಂಡಿದೆ. ರೋಟರಿ ಮದ್ದೂರು ಸಂಸ್ಥೆ 42 ವರ್ಷಗಳಿಂದ ವಿವಿಧ ಸ್ತರಗಳ ಸಮುದಾಯದ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ರೋಟರಿ ಮದ್ದೂರು ಸಂಸ್ಥೆಯ ಅಧ್ಯಕ್ಷ ಎಂ.ಸಿ.ಶಶಿಗೌಡ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ದಿನದ ಅಂಗವಾಗಿ ನಿವೃತ್ತ ಮುಖ್ಯ ಶಿಕ್ಷಕರಾದ ಸಿ. ಕೆಂಚೇಗೌಡ, ಎಚ್. ಬಿ.ರಮೇಶ್ ಹಾಗೂ ಟಿ.ಮೂಡಲಿಗೌಡ ಅವರನ್ನು ಸನ್ಮಾನಿಸಲಾಯಿತು.
ವಲಯ ಪಾಲಕ ಕುಮಾರರಾಜು, ಸಹಾಯಕ ಜಿಲ್ಲಾ ಪಾಲಕ ಬೈರೇಗೌಡ, ಸಂಸ್ಥೆಯ ಮಾಜಿ ಅಧ್ಯಕ್ಷರಾದ ಅಪ್ಪಾಜಿಗೌಡ, ಬಾಲರಾಜು, ಎಂ.ಎನ್.ಶಿವಣ್ಣ, ಕೆ.ಆರ್. ರಾಮರಾಜು, ತಿಪ್ಪೂರು ರಾಜೇಶ್, ಪಿ. ಶಿವಪ್ಪ, ಬಸವರಾಜು, ಕುಮಾರ್ ಎಚ್.ಸಿ. ಪ್ರಕಾಶ್ ಹಾಗೂ ಹರೀಶ್ ಬಾಬು, ಚನ್ನಂಕೇಗೌಡ ಇದ್ದರು.