ಚಾಮರಾಜನಗರದ ರೋಟರಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ಶಿಕ್ಷಕರಾದ ಆರ್.ವಿ.ರಘು, ಲಿಂಗಮ್ಮಣ್ಣಿ, ಅಸ್ಮಾತ ಬುಸ್ಸುಮ್ ಅವರನ್ನು ಸನ್ಮಾನಿಸಲಾಯಿತು. ಕೆಂಪನಪುರ ಮಹದೇವಸ್ವಾಮಿ, ಲಿಂಗರಾಜೇ ಅರಸ್ ಮತ್ತಿತರರಿದ್ದರು. 
ಜಿಲ್ಲೆ

ಶಿಕ್ಷಕರಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ

ಚಾಮರಾಜನಗರ: ಶಿಕ್ಷಕರಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ರೋಟರಿ ಅಧ್ಯಕ್ಷ ಕೆಂಪನಪುರ ಮಹದೇವಸ್ವಾಮಿ ಅಭಿಪ್ರಾಯಪಟ್ಟರು.


ನಗರದ ರೋಟರಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಲ್ಲಿ ಮಾತನಾಡಿದರು. ತಂದೆ-ತಾಯಿ ಮನೆಯ ಮೊದಲ ಗುರುವಾದರೆ, ನಂತರ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವವರೇ ಶಿಕ್ಷಕರು. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ, ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮುನ್ನಡೆಯುವ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ಡಯಟ್ ಕಾಲೇಜಿನ ಹಿರಿಯ ಉಪನ್ಯಾಸಕ ಲಿಂಗರಾಜೇ ಅರಸ್ ಮಾತನಾಡಿ, ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು, ಬದಲಾವಣೆ ಮತ್ತು ವಿದ್ಯಾರ್ಥಿಗಳನ್ನು ಆಕರ್ಷಣೆ ಮಾಡುವ ಗುಣವನ್ನು ಹೊಂದಿರಬೇಕು. ವಿದ್ಯಾರ್ಥಿಗಳ ಹೊಸ ವಿಚಾರಗಳ ಬಗ್ಗೆ ಆಸಕ್ತಿ ಮೂಡಿಸುವ ಜತೆಗೆ ತಾವು ಮಾಡುವ ಪಾಠ ಮತ್ತು ವಿಷಯವನ್ನು ಪ್ರೀತಿಯಿಂದ ಕಲಿಸುವಂತಾಗಬೇಕು ಎಂದರು.

ತಮ್ಮಡಹಳ್ಳಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಆರ್.ವಿ.ರಘು, ಮುಕ್ಕಡಹಳ್ಳಿ ಶಾಲೆಯ ಮುಖ್ಯಶಿಕ್ಷಕಿ ಲಿಂಗಮ್ಮಣ್ಣಿ, ಚಾ.ನಗರ ಪಟ್ಟಣದ ಉರ್ದು ಶಾಲೆಯ ಶಿಕ್ಷಕಿ ಅಸ್ಮಾತ ಬುಸ್ಸುಮ್ ಅವರನ್ನು ರೋಟರಿ ಪದಾಧಿಕಾರಿಗಳು ಸನ್ಮಾನಿಸಿದರು. ರೋಟರಿ ಸದಸ್ಯರು, ಶಿಕ್ಷಕರಾದ ಸಿದ್ದರಾಜು ಹಾಗೂ ಸಿದ್ದಮಲ್ಲಪ್ಪ ದಂಪತಿಯನ್ನು ಸನ್ಮಾನಿಸಲಾಯಿತು.

ರೋಟರಿ ಕಾರ್ಯದರ್ಶಿ ಕಾಗಲವಾಡಿ ಚಂದ್ರು, ಉಪಾಧ್ಯಕ್ಷ ನಾಗರಾಜು, ಮಾಜಿ ಅಧ್ಯಕ್ಷ ಶ್ರೀನಿವಾಸ್, ರೋಟರಿಯನ್‌ಗಳಾದ ಡಾ.ಆರ್.ಎಸ್.ನಾಗಾರ್ಜುನ್, ಜಿ.ಆರ್.ಅಶ್ವಥ್‌ನಾರಾಯಣ್, ಶ್ರೀನಿವಾಸಶೆಟ್ಟಿ, ನಾರಾಯಣ್, ರತ್ನಮ್ಮ, ದೀನಾ, ಸಂಜಯ್ ಇತರರಿದ್ದರು.