ಜಿಲ್ಲೆ

ಶಿಕ್ಷಕರಿಂದ ಪ್ರಜ್ಞಾವಂತ ಸಮಾಜ ಸೃಷ್ಟಿ, ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅಭಿಪ್ರಾಯ, ನಿಸ್ವಾರ್ಥ ಸೇವೆ ಸಲ್ಲಿಸುವ ಬೋಧಕರು ಆರೋಗ್ಯಕ್ಕೂ ಗಮನ ಕೊಡಬೇಕು

ನೆಲಮಂಗಲ: ಶಿಕ್ಷಣ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರ ಕೊಡುಗೆ ಅನನ್ಯ ಎಂದು ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.

ನಗರದ ಗೋಪಿವೆಂಕಟೇಶ್ವರ ಸಮುದಾಯಭವನದಲ್ಲಿ ತಾಲೂಕು ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ವಿಶೇಷ ಗೌರವಸ್ಥಾನವಿದೆ. ಶಿಕ್ಷಕರು ದೇಶದ ಚುಕ್ಕಾಣಿ ಹಿಡಿಯಬಲ್ಲರು ಎಂಬುದನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರು ತೋರಿಸಿಕೊಟ್ಟಿದ್ದಾರೆ ಎಂದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ತಾಲೂಕಿಗೆ ಉತ್ತಮ ಫಲಿತಾಂಶ ತಂದುಕೊಡುವಲ್ಲಿ ಶಿಕ್ಷಕರ ಶ್ರಮ ಅಪಾರ. ವರ್ಷವಿಡಿ ನಿಸ್ವಾರ್ಥ ಸೇವೆ ಸಲ್ಲಿಸುವ ಶಿಕ್ಷಕರು ತಮ್ಮ ಆರೋಗ್ಯದ ಬ್ಗೆಯೂ ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು.

3 ಶಾಲೆಗಳ ದತ್ತು: ಶಾಸಕನಾಗಿ ತಾಲೂಕಿನ 3 ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದೇನೆ. ಮುಂದೆ, ಶಾಸಕರ ವಿಶೇಷ ಅನುದಾನದಡಿ ತಾಲೂಕಿನ 25 ಸರ್ಕಾರಿ ಶಾಲೆಗಳಿಗೆ ಗ್ರಂಥಾಲಯವನ್ನು ವ್ಯವಸ್ಥೆಗೊಳಿಸುವ ಉದ್ದೇಶವಿದೆ. ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಅದಷ್ಟು ಬೇಗ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಡಾ. ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.

ಇದಕ್ಕೂ ಮುನ್ನ ಸರ್ವಪಲ್ಲಿ ಡಾ. ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ, ತಹಸೀಲ್ದಾರ್ ಕೆ. ಮಂಜುನಾಥ್ ಮತ್ತಿತರರು ಪುಷ್ಪನಮನ ಸಲ್ಲಿಸಿದರು. ಅಕಾಲಿಕವಾಗಿ ಮರಣ ಹೊಂದಿದ ಶಿಕ್ಷಕರಿಗೆ ಒಂದು ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

40 ಶಿಕ್ಷಕರಿಗೆ ಸನ್ಮಾನ: ತಾಲೂಕಿನ ವಿವಿಧ ಶಾಲೆಗಳಲ್ಲಿ ಮುಖ್ಯಶಿಕ್ಷಕರಾಗಿ, ಸಹಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ 40 ಶಿಕ್ಷಕರು ಮತ್ತು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯಸಿಯಲ್ಲಿ ಅತಿಹೆಚ್ಚು ಅಂಕಪಡೆದ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜತೆಗೆ ಇತ್ತೀಚೆಗೆ ಮೃತರಾದ ಶಿಕ್ಷಕರ ಕುಟುಂದವರನ್ನು ಶಾಸಕರು ಸನ್ಮಾನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಪುಟ್ಟರುದ್ರಾರಾಧ್ಯ, ತಹಸೀಲ್ದಾರ್ ಕೆ. ಮಂಜುನಾಥ್, ಇಒ ಎಲ್. ಮೋಹನ್‌ಕುಮಾರ್, ಬಿಇಒ ಕೆ.ಸಿ. ರಮೇಶ್, ಕ್ಷೇತ್ರ ಸಮನ್ವಯಾಧಿಕಾರಿ ನರಸಿಂಹಯ್ಯ, ಆಕ್ಷರದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಟಿ. ವಾಸುದೇವಮೂರ್ತಿ, ನಿವೃತ್ತ ಮುಖ್ಯಶಿಕ್ಷಕರಾದ ಶ್ರೀನಿವಾಸ್, ರಾಜಣ್ಣ ಮತ್ತಿತರರಿದ್ದರು.