ಚಾಮರಾಜನಗರ: 2024-25ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಿಗೆ ನಿರ್ದಿಷ್ಟಪಡಿಸಿದ ತತ್ಸಮಾನ ವೃಂದದ ಹುದ್ದೆಗಳಾದ ಸಿಆರ್‌ಪಿ, ಬಿಆರ್‌ಪಿ, ಶಿಕ್ಷಣ ಸಂಯೋಜಕರು, ತಾಂತ್ರಿಕ ಸಹಾಯಕರು, ಬಿಆರ್‌ಸಿ, ವಿಷಯ ಪರಿವೀಕ್ಷಕರು, ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳು ಮತ್ತು ಮಧ್ಯಾಹ್ನದ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲು ಮೇ 26 ರವರೆಗೆ ಹಾಲಿ ಕರ್ತವ್ಯನಿರತ ಅರ್ಹ ಶಿಕ್ಷಕರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮೇ 26ರೊಳಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ (ವಿದ್ಯಾರ್ಹತೆ ಹಾಗೂ ವೈಟೇಜ್‌ಗೆ ಸಂಬಂಧಿಸಿದ ಲಗತ್ತುಗಳನ್ನು ಅಭ್ಯರ್ಥಿಗಳೇ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು) ಮೇ 28ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸೇವಾನುಭವ ಮತ್ತು ಹೆಚ್ಚಿನ ವಿದ್ಯಾರ್ಹತೆಗೆ ನಿಗದಿಪಡಿಸಿರುವ ಅಂಕಗಳು ಮತ್ತು ಅರ್ಹತೆಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಪರಿಶೀಲಿಸಿ ಅರ್ಜಿಗಳಿಗೆ ಅನುಮೋದನೆ ನೀಡುವರು. ಮೇ 30ರೊಳಗೆ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಬೆಂಗಳೂರಿನ ಕೆ.ಎಸ್.ಇ.ಎ.ಬಿ ನಿರ್ದೇಶಕರು ಆಯಾ ಜಿಲ್ಲಾ ಡಯಟ್ ಪ್ರಾಂಶುಪಾಲರಿಗೆ ಕಳುಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ವೀಕ್ಷಿಸಬಹುದಾಗಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.