ಹೊಸಪೇಟೆ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ನ.09ಕ್ಕೆ ಕಲಬುರಗಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಫ್‌ಐ ಸಂಘಟನೆಯ ಕೇಂದ್ರ ಸಮಿತಿಯ ಸದಸ್ಯ ಅಮರೇಶ್ ಕಡಗದ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಕರ ನೇಮಕಾತಿ ಆದೇಶ ಉತ್ತಮ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಈ ಸಾಲಿನಲ್ಲಿ 20 ಸಾವಿರ ಪಿಎಸ್‌ಟಿ ಶಿಕ್ಷಕರು ಸೇವಾನಿವೃತ್ತಿ ಹೊಂದಿದ್ದಾರೆ. 1996-97ನೇ ಸಾಲಿನಲ್ಲಿ ಅಂದಿನ ಶಿಕ್ಷಣ ಸಚಿವರು ಗೋವಿಂದಗೌಡರ ಅವಧಿಯಲ್ಲಿ ಭರ್ತಿಯಾದ 40 ಸಾವಿರ ಶಿಕ್ಷಕರು ಮುಂದಿನ ವರ್ಷ ಸೇವಾನಿವೃತ್ತಿ ಹೊಂದಲಿದ್ದಾರೆ. ಆದ್ದರಿಂದ 48 ಸಾವಿರ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಪೈಕಿ 22 ಸಾವಿರ ಅಂದರೆ ಶೇ.45.80ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರಲ್ಲಿ ಅರ್ಧದಷ್ಟು ಶಿಕ್ಷಕರನ್ನೂ ನೇಮಕ ಮಾಡಿಕೊಂಡಿಲ್ಲ. ಶೈಕ್ಷಣಿಕ ಈ ಸಾಲಿನಲ್ಲಿ 25 ಸಾವಿರ ಶಾಲೆಗಳಲ್ಲಿ ಒಬ್ಬರಿಬ್ಬರು ಶಿಕ್ಷಕರಿದ್ದಾರೆ. ಕನಿಷ್ಠ 10ಕ್ಕೂ ಅಧಿಕ ಶಿಕ್ಷಕರ ನೇಮಕ ಮಾಡಿಕೊಳ್ಳುವುದು ಅಗತ್ಯವಿದೆ. 5267 ಶಿಕ್ಷಕರ ಹುದ್ದೆಗಳ ಭರ್ತಿ ಸಾಕಾಗಲ್ಲ. ಈ ಭಾಗದ ಆಕಾಂಕ್ಷಿಗ¼ ಅನುಕೂಲಕ್ಕಾಗಿ ನೇಮಕಾತಿ ಸಂಖ್ಯೆ ಹೆಚ್ಚಿಸ ಬೇಕು ಎಂದು ಒತ್ತಾಯಿಸಿದರು.
ಬಿ.ಎಡ್ ಪದವಿ ಮಾನದಂಡದ ಮೇಲೆ ನೇಮಕ ಮಾಡಿಕೊಳ್ಳುವ 6 ರಿಂದ 8ನೇ ತರಗತಿಗೆ ಶಿಕ್ಷಕರ ನೇಮಕಾತಿಯಲ್ಲಿ ಕೇವಲ 78 ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ನೇಮಕಾತಿಗಳಲ್ಲಿ ಅಜಗಜಾಂತರ ವ್ಯತ್ಯಾಸಗಳು ಇರುವುದನ್ನು ಇಲಾಖೆ ಮತ್ತು ಸಚಿವರಾದ ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ 50 ಸಾವಿರ ಹುದ್ದೆಗಳ ಭರ್ತಿಯ ಅಗತ್ಯವಿದ್ದು, 5 ಸಾವಿರಕ್ಕೆ ಹೆಚ್ಚಿಸಿ ಒಟ್ಟು 10,267ಕ್ಕು ಅಧಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ದೊಡ್ಡ ಬಸವರಾಜ್, ಶಿವಾರೆಡ್ಡಿ, ಕೆ.ಎ.ಪವನ್ ಕುಮಾರ್, ಶಾರದ ಇದ್ದರು.