ಬೀದರ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಪ್ರದಾನ, ಶೈಕ್ಷಣಿಕ ಮಾರ್ಗದರ್ಶನ ಕಾರ್ಯಾಗಾರವನ್ನು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಬಿ.ಉದ್ಘಾಟಿಸಿದರು. ಡಾ.ಮಹ್ಮದ್ ಗುಲ್ಶಿನ್, ರಾಜೇಂದ್ರಕುಮಾರ ಗಂದಗೆ, ಮಹೆಬೂಬ್ ಪಟೇಲ್, ರಾಮು ಗುಗವಾಡ, ಪ್ರಶಾಂತ ರಾಗಾ, ವಿಜಯಕುಮಾರ ಪಾಟೀಲ್ ಇತರರಿದ್ದರು. 
ಜಿಲ್ಲೆ

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಸಂಘ ಸಿದ್ಧ

ಬೀದರ್: ಶಿಕ್ಷಕರ ಏನೇ ಸಮಸ್ಯೆಗಳಿದ್ದರೂ ಪರಿಹರಿಸಲು ಸಂಘ ಸಿದ್ಧವಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಬಿ. ಹೇಳಿದರು.

ರಾಜ್ಯ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ, ಮುಖ್ಯಶಿಕ್ಷಕರು, ಪಾಲಕರಿಗೆ ಸನ್ಮಾನ ಹಾಗೂ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಏಳನೇ ವೇತನ ಆಯೋಗದ ಶಿಫಾರಸು ಜಾರಿ, ಅನುದಾನಿತ ಶಿಕ್ಷಕರಿಗೆ ಶಿಶುಪಾಲನೆ ರಜೆ, ಆರೋಗ್ಯ ಸಂಜೀವಿನಿ ಯೋಜನೆ ಸೇರಿ ಶಿಕ್ಷಕರ ಅನೇಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಘ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ ಮಾತನಾಡಿ, ಶಿಕ್ಷಕರ ವರ್ಗಾವಣೆ, ಮುಂಬಡ್ತಿ, ಮುಖ್ಯಶಿಕ್ಷಕರ ಪ್ರಭಾರ ಭತ್ಯೆ, ಉಪನ್ಯಾಸಕ ಹುದ್ದೆಗೆ ಬಡ್ತಿ ಮೊದಲಾದ ಬೇಡಿಕೆಗಳ ಬಗ್ಗೆ ಸಂಘ ಆಡಳಿತದ ಗಮನ ಸೆಳೆಯಲಿದೆ ಎಂದು ತಿಳಿಸಿದರು.

ಡಯಟ್ ಪ್ರಾಚಾರ್ಯ ಡಾ.ಮಹ್ಮದ್ ಗುಲ್ಶಿನ್ ಮಾತನಾಡಿ, ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶೇಖ ಮಹೆಬೂಬ್ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ ರಾಗಾ, ಪ್ರಮುಖರಾದ ರವೀಂದ್ರ ಮಾಲಿಪಾಟೀಲ್, ವಿಜಯಕುಮಾರ ಪಾಟೀಲ್ ಯರನಳ್ಳಿ, ಗೀತಾ, ಭೀಮಣ್ಣ ಹಡಪದ ಉಪಸ್ಥಿತರಿದ್ದರು. ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಆಶೀಶ್ ಸೊಲ್ಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಪ್ಪ ಜನತಾನಗರ, ಶ್ರೀದೇವಿ ನಿರೂಪಣೆ ಮಾಡಿದರು. ಜೀತೇಂದ್ರ ವಂದಿಸಿದರು.

ವಿದ್ಯಾರ್ಥಿಗಳನ್ನು ಜ್ಞಾನವೆಂಬ ಬೆಳಕಿನತ್ತ ಮುನ್ನಡೆಸುವ ಹಾಗೂ ಶಿಸ್ತು ಬದ್ಧ ಜೀವನವನ್ನು ಕಲಿಸುವ ಕಾರ್ಯದಲ್ಲಿ ಪ್ರಮುಖವಾಗಿ ಪ್ರಾಥಮಿಕ ಶಿಕ್ಷಕರು ಹೆಚ್ಚಿನ ಶ್ರಮ ವಹಿಸುತ್ತಾರೆ. ಸುಂದರ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ.
| ರಾಜೇಂದ್ರಕುಮಾರ ಗಂದಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ