ಜಿಲ್ಲೆ

ಶಿಕ್ಷಕರ ಸಂಕಷ್ಟಕ್ಕೆ ಮಿಡಿದ ಸಚಿವ ಎಂಟಿಬಿ, ಖಾಸಗಿ, ಅನುದಾನಿತ ಶಾಲೆಗಳ ಗುರುಗಳಿಗೆ ಗೌರವ ನಮನ, ಪ್ರೋತ್ಸಾಹ ಧನದ ಭರವಸೆ

ಬೆಂಗಳೂರು ಗ್ರಾಮಾಂತರ: ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಹೊಸಕೋಟೆ ಕ್ಷೇತ್ರದಾದ್ಯಂತ ಜನರಿಗೆ ಆಹಾರ ಕಿಟ್ ವಿತರಣೆ ಕಾಯಕ ಮುಂದುವರಿಸಿರುವ ಪೌರಾಡಳಿತ ಮತ್ತು ಸಕ್ಕರೆ ಸಚಿವ ಖಾತೆ ಎಂಟಿಬಿ ನಾಗರಾಜ್ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರ ಸಂಕಷ್ಟಕ್ಕೂ ಸ್ಪಂದಿಸಿದ್ದಾರೆ.

ಹೊಸಕೋಟೆಯಲ್ಲಿ ಬುಧವಾರ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಆಹಾರ ಕಿಟ್ ವಿತರಿಸಿ ಆತ್ಮಸ್ಥೈರ್ಯ ತುಂಬಿದ ಸಚಿವರು, ಕರೊನಾ ಸಂಕಷ್ಟದಲ್ಲಿ ನಮ್ಮ ಕಡೆಯಿಂದ ಗುರುಗಳಿಗೆ ಸಲ್ಲಿಸುತ್ತಿರುವ ಗೌರವ ನಮನ ಎಂದು ಹೇಳಿದರು.

ಒಂದೂವರೆ ವರ್ಷದಿಂದ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಭವಿಷ್ಯವೇ ಡೋಲಾಯಮಾನವಾಗಿದೆ. ಇಂಥ ಸಂದರ್ಭದಲ್ಲಿ ಶಿಕ್ಷಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ಸಿಎಂ ಹಾಗೂ ಶಿಕ್ಷಣ ಸಚಿವರ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೇರೆ ಉದ್ಯೋಗ ಮಾಡಲು ಕಷ್ಟಸಾಧ್ಯ: ಶಿಕ್ಷಕರು ಶಾಲೆಗಳಲ್ಲಿ ಪಾಠ ಮಾಡುವ ಕಾಕ ಹೊರತುಪಡಿಸಿ ಮತ್ಯಾವುದೇ ಕೆಲಸ ಮಾಡುವುದು ಕಷ್ಟಸಾಧ್ಯ. ವಿದ್ಯಾದಾನ ಮಾಡುವ ಇಚ್ಛೆಯಿಂದ ಈ ಕ್ಷೇತ್ರ ಆಯ್ದುಕೊಂಡಿರುತ್ತಾರೆ. ಆದರೆ ಒಂದೂವರೆ ವರ್ಷದಿಂದ ಶಿಕ್ಷಕರಿಗೆ ದಿಕ್ಕುತೋಚದಂತಾಗಿದ್ದಾರೆ. ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ. ಈ ಬಗ್ಗೆ ಕಣ್ಣಾರೆ ಕಂಡು ಶಿಕ್ಷಕರ ನೆರವಿಗೆ ಮುಂದಾಗಿದ್ದೇನೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದು ಹೊಸಕೋಟೆ ಕ್ಷೇತ್ರದಲ್ಲಿನ ಎಲ್ಲ ಖಾಸಗಿ ಹಾಗೂ ಅನುದಾನಿತ ಶಾಲೆ ಶಿಕ್ಷಕರಿಗೆ ಆಹಾರ ಕಿಟ್, ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ಪರಿಕರ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಹಲವು ಖಾಸಗಿ ಶಾಲೆಗಳ ಶಿಕ್ಷಕರಿಗೆ ಸಂಬಳ ನೀಡಿಲ್ಲ. ಕೆಲವು ಶಿಕ್ಷಕರನ್ನು ಕೆಲಸದಿಂದಲೇ ತೆಗೆದುಹಾಕಿದ್ದಾರೆ. ಇಂಥ ಶಿಕ್ಷಕರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಶಿಕ್ಷಣ ಕ್ಷೇತ್ರದ ಸೇವೆ ಹೊರತುಪಡಿಸಿ ಮತ್ಯಾವುದೇ ಜೀವನೋಪಾಯದ ಕೆಲಸ ಮಾಡುವುದು ಇಂಥವರಿಗೆ ಕಷ್ಟವಾಗಿದೆ. ಇಂಥ ಶಿಕ್ಷಕರಿಗೆ ಸರ್ಕಾರ ಸಹಾಯ ಹಸ್ತ ಚಾಚಲಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ಶಿಕ್ಷಕರಿಂದ ವಂದನೆ: ಕರೊನಾ ಸಂಕಷ್ಟದಲ್ಲಿ ಖಾಸಗಿ ಹಾಗೂ ಅನುದಾನಿತ ಶಿಕ್ಷಕರ ಸಂಕಷ್ಟಕ್ಕೆ ಸಚಿವರು ಸ್ಪಂದಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಮಗೂ ಪ್ರೋತ್ಸಾಹಧನದ ಭರವಸೆ ನೀಡಿದ್ದಾರೆ. ಇದು ಮುಳುಗುತ್ತಿದ್ದ ನಮ್ಮ ಜೀವನಕ್ಕೆ ಅಸರೆಯದಂತಾಗಿದೆ ಎಂದು ಶಿಕ್ಷಕರು ವಂದನೆ ಸಲ್ಲಿಸಿದರು