Oplus_16 ಹುಮನಾಬಾದ್‌ನಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಉದ್ಘಾಟಿಸಿದರು. ಶ್ರೀ ವಿರೂಪಾಕ್ಷ ಶಿವಾಚಾರ್ಯರು, ಎಂಎಲ್ಸಿಗಳಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಪ್ರಮುಖರಾದ ರವಿಂದ್ರರೆಡ್ಡಿ, ಮುರೇಗೆಂದ್ರ, ವೆಂಕಟೇಶ ಗೂಡಾಳ ಇತರರಿದ್ದರು. 
ಜಿಲ್ಲೆ

ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು

ಹುಮನಾಬಾದ್: ರಾಷ್ಟ್ರ ರಾಜ್ಯ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಬಸವರಾಜ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಶನಿವಾರ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ೬೪ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು, ಪ್ರತಿಯೊಬ್ಬ ಶಿಕ್ಷಕರು ಡಾ.ರಾಧಕೃಷ್ಣನ್ ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತರಬೇಕೆಂದರು.

ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಯೋಜನೆ ನೀಡುತ್ತಿದ್ದು, ಅದರ ಸದುಪಯೋಗವಾಗಬೇಕು. ಕ್ಷೇತ್ರದಲ್ಲಿ ಶಿಕ್ಷಣ ಅಭಿವೃದ್ಧಿಗೆ ಸುಮಾರು ೧೬ ಕೋಟಿ ರೂ. ಅನುದಾನ ನೀಡಿದ್ದು, ವಿವಿಧಡೆ ಸ್ಮಾರ್ಟ್ ಕ್ಲಾಸ್ ಹಾಗೂ ಕೋಣೆಗಳ ನಿರ್ಮಾಣ ಮಾಡಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಪ್ರಮಾಣಿಕತೆಯಿಂದ ಶ್ರಮಿಸಿ ಉತ್ತಮ ಫಲಿತಾಂಶ ತರಬೇಕು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಸಮಸ್ಯೆ, ಸೌಲಭ್ಯಗಳ ಕೊರತೆಯಿದ್ದರೆ ಅಧಿಕಾರಿಗಳು, ಶಿಕ್ಷಕರು ನನ್ನ ಗಮನಕ್ಕೆ ತಂದಲ್ಲಿ ಸ್ಪಂದಿಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಮಾತನಾಡಿ, ಸಮಗ್ರ ಅಭಿವೃದ್ಧಿಗೆ ಶಿಕದಱಣ ಅತ್ಯಂತ ಅಗತ್ಯವಾಗಿದೆ. ಶೈಕ್ಷಣಿಕ  ಅಭಿವೃದ್ಧಿಗೆ ಪಕ್ಷಭೇದ ಮರೆತು ಜನಪ್ರತಿನಿಧಿಗಳಾದ ನಾವೂ ಶಾಲೆಗಳನ್ನು ದತ್ತು ಪಡೆದು ಮಾದರಿ ಶಾಲೆಗಳಾಗಿ ಮಾಡಲು ಮುಂದಾಗುವುದು ಅಗತ್ಯವಾಗಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದೆ. ಶಿಕ್ಷಕರು ತಮ್ಮದೆ ಆದ ಘನತೆ, ಗೌರವ ಕಾಪಾಡಿಕೊಳ್ಳುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿದರು. ಸಾನ್ನಿಧ್ಯ ವಹಿಸಿದ ಹುಡಗಿ ಹಿರೇಮಠದ ಶ್ರೀ ವಿರೂಪಾಕ್ಷ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಬೀದರ್‌ನ ಶಿವಶರಣ್ಣಪ್ಪ ಹುಗ್ಗಿ ಪಾಟೀಲ್ ಉಪನ್ಯಾಸ ನೀಡಿದರು. ಬಿಇಒ ವೆಂಕಟೇಶ ಗೂಡಾಳ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಬಿಸಿ ಊಟ ಅಧಿಕಾರಿ ಕರುಣದೇವಿ ಸಿಂಧೆ, ಬಿಆರ್‌ಸಿ ಅಧಿಕಾರಿ ಪ್ರೀತಮ್ ಸಿಂಗ್ ಜಾಧವ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ , ತಾಲೂಕಾಧ್ಯಕ್ಷ ಮುರಗೆಂದ್ರ ಸಜ್ಜನಶೆಟ್ಟಿ, ಪ್ರಮುಖರಾದ ಪ್ರಭುಲಿಂಗ ಪಾಟೀಲ್, ಮಹಿಬೂಬ್ ಪಟೇಲ್, ಶರದ ನಾರಾಣಪೇಕರ, ರಾಜಪ್ಪ ಸಿಂದೋಲ್, ಸೂರ್ಯಕಾಂತ ಹಾವಶೇಟ್ಟಿ, ಸಾರಿಕಾ ಗಂಗಾ, ಸಿದ್ದಲಿಂಗ ನಿರ್ಣಾ, ವೀರಂತರಡ್ಡಿ ಜಂಪಾ, ಶಶಿಧರ ಘಾವಲಕರ, ಶಿವರಾಜ ಮೇತ್ರೆ ಇತರರಿದ್ದರು. ತಾತೇರಾವ ಕಾಂಬಳೆ ಸ್ವಾಗತಿಸಿದರು. ಮಲ್ಲಪ್ಪ ಜಿಗಜೀವಣಗಿ ನಿರೂಪಣೆ ಮಾಡಿದರು. ವಿವಿಧ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಮೆರವಣಿಗೆಗೆ ಚಾಲನೆ: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗ್ಗೆ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜ ಆವರಣದಲ್ಲಿ ಡಾ.ರಾಧಾಕೃಷ್ಣನರ ಭಾವಚಿತ್ರಕ್ಕೆ ಎಂಲ್ಸಿ ಭೀಮರಾವ ಪಾಟೀಲ್ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಅಂಬೇಡ್ಕರ, ಸರ್ದಾರ್ ಪಟೇಲ್, ಬಾಲಜಿ, ಬಸವೇಶ್ವರ ವೃತ್ತದ ಮೂಲಕ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ಜರುಗಿತು. ಮರೆವಣಿಗೆಯಲ್ಲಿ ಶಿಕ್ಷಕ, ಶಿಕ್ಷಕಿಯರು ಬಿಳಿ ಸಮವಸ್ತ್ರ ಧರಿಸಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಸುಂದರ ಹಾಗೂ ಬಲಿಷ್ಠ ರಾಷ್ಟç ಕಟ್ಟುವುದು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ. ಗುರುಗಳು ಭವಿಷ್ಯ ರೂಪಿಸುವ ಹಾಗೂ ಸುಂದರ ಸಮಾಜ ನಿರ್ಮಾಣದ ಶಿಲ್ಪಿಗಳು. ಪ್ರತಿಯೊಬ್ಬ ಶಿಕ್ಷಕರು ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಿ.

| ಡಾ. ಚಂದ್ರಶೇಖರ ಪಾಟೀಲ್ ಎಂಎಲ್ಸಿ