ಜಿಲ್ಲೆ

ಶಿಕ್ಷಕರ ಮಾರ್ಗದರ್ಶನವಿಲ್ಲದೆ ಸಾಧನೆ ಅಸಾಧ್ಯ

ಕಲಬುರಗಿ: ಶಿಕ್ಷಕರ ಸಾಮರ್ಥ್ಯದ ಬಗ್ಗೆ ಟೀಕೆ ಮಾಡಬೇಡಿ. ಅವರ ಆಶೀರ್ವಾದ ಮತ್ತು ಮಾರ್ಗದರ್ಶನವಿಲ್ಲದೆ ನೀವು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಹೇಳಿದರು.
ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೊಸದಾಗಿ ಪ್ರವೇಶ ಪಡೆದ ಪಿಜಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ತರಗತಿಯಲ್ಲಿ ಕಲಿಸಲು ತುಂಬ ಶ್ರಮಿಸುತ್ತಾರೆ. ತರಗತಿ ಸಿದ್ಧತೆಗಾಗಿ ಸಾಕಷ್ಟು ಸಮಯ ಕಳೆಯುತ್ತಾರೆ. ಶಿಕ್ಷಕರನ್ನು ಗೌರವಿಸಿ ಸಮಯಪಾಲನೆ ಜತೆಗೆ ಗಮನ ಕೊಟ್ಟು ಪಾಠ ಕೇಳಿ. ವಿವಿ ಕ್ಯಾಂಪಸ್‌ನಲ್ಲಿ ನಿಮ್ಮ ವಾಸ್ತವ್ಯವನ್ನು ಸರಿಯಾಗಿ ಬಳಸಿಕೊಳ್ಳಿ. ಮೊಬೈಲ್ ವ್ಯಸನಿಯಾಗದೆ ಕಷ್ಟಪಟ್ಟು ಕೆಲಸ ಮಾಡಿ. ವಿದ್ಯಾರ್ಥಿಗಳು ಯಾವಾಗಲು ಜ್ಞಾನ ಅರಸಿಕೊಂಡು ಹೋಗಿ ಉತ್ತಮ ಅಂಕ ಗಳಿಸಬೇಕು. ಅಂಕಗಳು ನಿಮ್ಮ ಜ್ಞಾನದ ಸೂಚ್ಯಂಕ ಎಂದರು.
ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಇಂದಿನ ಜ್ಞಾನ ಆಧಾರಿತ ಆರ್ಥಿಕತೆಯಲ್ಲಿ ರಾಷ್ಟçಕ್ಕೆ ಆಸ್ತಿಯಾಗಿ. ಕಾನೂನು ವಿಷಯ ಸೇರಿ ಎಲ್ಲ ವಿಭಾಗಗಳಿಗೆ ವಿಪುಲ ಅವಕಾಶಗಳಿದ್ದು, ಸದ್ಬಳಕೆ ಮಾಡಿಕೊಳ್ಳಲು ನೀವು ಸಮರ್ಥರಾಗಿರಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಜೀವನದ ಎಲ್ಲ ಯಶಸ್ಸಿಗೆ ಶಿಕ್ಷಣವೇ ಆಧಾರ. ಉನ್ನತ ಸ್ಥಾನಕ್ಕೆ ಬರಲು ವಿವಿ ಸಂಪನ್ಮೂಲ ಮತ್ತು ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಿ. ಭೌತಿಕ ಸಂಪತ್ತು ಶಾಶ್ವತವಲ್ಲ, ಜ್ಞಾನವೇ ನಿಜವಾದ ಸಂಪತ್ತು. ಜ್ಞಾನ ಮತ್ತು ಸುಸಂಸ್ಕೃತ ವ್ಯಕ್ತಿತ್ವದೊಂದಿಗೆ ನಿಮ್ಮ ಜೀವನ ನಿರ್ಮಿಸಿಕೊಳ್ಳಿ. ಸಮಾಜದಲ್ಲಿ ಒಳ್ಳೆಯವರ ಕೊರತೆ ಇದ್ದು, ರಾಷ್ಟçದ ಉತ್ತಮ ಪ್ರಜೆಯಾಗಿ ಈ ಕೊರತೆ ನೀಗಿಸಬೇಕು ಎದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್ ಮಾತನಾಡಿದರು. ಡಾ.ವೆಂಕಟರಮಣ ದೊಡ್ಡಿ, ಪರೀಕ್ಷಾ ನಿಯಂತ್ರಕ ಕೋಟ ಸಾಯಿಕೃಷ್ಣ, ಗ್ರಂಥಪಾಲಕ ಡಾ.ಪಿ.ಎಸ್. ಕಟ್ಟಿಮನಿ, ಆಂತರಿಕ ದೂರು ಸಮಿತಿ ಅಧ್ಯಕ್ಷೆ ಪ್ರೊ.ಸುನೀತಾ ಮಂಜನಬೈಲ್, ಸಂಶೋಧನಾ ಮತ್ತು ಅಭಿವೃದ್ಧಿ ಕೋಶ ಹಾಗೂ ಕುಂದುಕೊರತೆ ಕೋಶದ ನೋಡಲ್ ಅಧಿಕಾರಿ ಪ್ರೊ.ಸತ್ಯನಾರಾಯಣ, ಮುಖ್ಯ ವಾರ್ಡನ್ ಡಾ.ಬಸವರಾಜ ಎಂ.ಎಸ್., ಸಾಂಸ್ಕೃತಿಕ ಸಂಯೋಜಕ ಡಾ.ಮಲ್ಲಿಕಾರ್ಜುನ ಹೂಗಾರ ತಮ್ಮ ಇಲಾಖೆ ಮತ್ತು ಕೋಶಗಳು ಒದಗಿಸುವ ಸೌಲಭ್ಯ ಮತ್ತು ಸೇವೆಗಳ ಕುರಿತು ವಿವರಿಸಿದರು.
ಡೀನ್ ಡಾ.ಬಸವರಾಜ ಕುಬಕಡ್ಡಿ ಸ್ವಾಗತಿಸಿ ವಂದಿಸಿದರು. ವಿಜ್ಞಾನೇಶ್ವರ ಪ್ರತಿಷ್ಠಾನದ ಕಾರ್ಯದರ್ಶಿ ಮಹಾದೇವಯ್ಯ ಕರದಳ್ಳಿ ಇತರರಿದ್ದರು.