ಚಾಮರಾಜನಗರ: ಸೇವಾನಿರತ ಪದವೀಧರ ಶಿಕ್ಷಕರ ಸಮಸ್ಯೆ ಬಗೆಹರಿಸುವವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ಮರು ಹೊಂದಾಣಿಕೆಯನ್ನು ರದ್ದುಪಡಿಸಬೇಕು ಎಂದು ಶನಿವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ನಟರಾಜ್ ಮಾತನಾಡಿ, ಸಿ ಅಂಡ್ ಆರ್ ನಿಯಮ ತಿದ್ದುಪಡಿಯಾಗದೇ ಯಾವುದೇ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ಮಾಡಬಾರದು.
ಹೆಚ್ಚುವರಿ ನಿಯಮದಲ್ಲಿ ಮುಖ್ಯ ಶಿಕ್ಷಕರ ಹುದ್ದೆಯನ್ನು ಪಿ.ಟಿ.ಆರ್ ನಿಂದ ಕೈ ಬಿಡಬೇಕು.
ಹೆಚ್ಚುವರಿ ಮರುಹೊಂದಾಣಿಕೆಯನ್ನು ತಾಲೂಕಿನೊಳಗೆ ಮಾತ್ರ ಮಾಡಬೇಕು. ಜಿಲ್ಲಾ ಹಂತದಲ್ಲಿ ಮರುಹೊಂದಾಣಿಕೆಯನ್ನು ಕೈಬಿಡಬೇಕು. ಹೆಚ್ಚುವರಿ ಪಿಎಸ್‌ಶಿಕ್ಷಕರಿಗೆ ಖಾಲಿ ಇರುವ ಜಿ.ಪಿ.ಟಿ ಹುದ್ದೆಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಶಾಲೆಗಳು ವಿಷಯಾಧಾರಿತ ಹಾಗೂ ತರಗತಿಗೊಬ್ಬ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ, ಹಾಗಾಗಿ ಹೆಚ್ಚುವರಿಯನ್ನು ಕೈಬಿಡುವುದು. ಇಲಾಖೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಖ್ಯೆ ಬಹಳ ಕಡಿಮೆ ಇದ್ದು, ಅವರನ್ನು ಸಹ ಯಾವುದೇ ಕಾರಣಕ್ಕೂ ಹೆಚ್ಚುವರಿ ಮಾಡಬಾರದು. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲೆಗೊಬ್ಬರು ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಕರ್ತವ್ಯ ನಿರ್ವಹಿಸುವಂತೆ ಮಾಡಬೇಕು. ಹೆಚ್ಚುವರಿಯಾದ ಶಿಕ್ಷಕರಿಗೆ ಮುಂದಿನ ವರ್ಗಾವಣೆಗಳಲ್ಲಿ ಸೇವಾವಧಿಯನ್ನು ಮಿತಿಗೊಳಿಸದೇ ಮುಕ್ತವಾಗಿ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಡಿ.ಎನ್.ಭರತ್ ಭೂಷಣ, ಎಂ.ಡಿ.ಮಹದೇವಯ್ಯ, ರಾಚಯ್ಯ, ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಸೋಮಣ್ಣ, ಪದಾಧಿಕಾರಿ ಮಹದೇವಸ್ವಾಮಿ, ಬಿ.ಕೃಷ್ಣಮೂರ್ತಿ, ಸುಧಾ, ಸವಿತರಾಣಿ, ನಾಗರಾಜು, ಸಿ.ಮಹದೇವಸ್ವಾಮಿ, ಮಲ್ಲಿಕಾರ್ಜುನ ಹಾಗೂ ಇತರರು ಹಾಜರಿದ್ದರು.