ಸಾಗರದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಡಾ. ಶುಭಾ ಮರವಂತೆ, ನಾಗೇಶ್ ಬ್ಯಾಲಾಳ್, ಜಿ.ಪರಮೇಶ್ವರಪ್ಪ, ಕೆ.ಜಗನ್ನಾಥ್, ಲಕ್ಷ್ಮಣ್ ಆರ್.ನಾಯ್ಕ ಇತರರಿದ್ದರು. 
ಜಿಲ್ಲೆ

ಶಿಕ್ಷಕರ ಬಗ್ಗೆ ಇರಲಿ ಗೌರವ

ಸಾಗರ: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ಮತ್ತು ಪವಿತ್ರವಾದದ್ದು. ಮಕ್ಕಳ ಇಡೀ ಬದುಕನ್ನು ಶಿಕ್ಷಕರು ರೂಪಿಸುತ್ತಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಮಂಗಳವಾರ ನಗರದ ನಗರಸಭೆ ರಂಗಮಂದಿರದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಮತ್ತು ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಶಿಕ್ಷಿಸದೆ ಶಿಕ್ಷಣ ನೀಡಲು ಸಾಧ್ಯವಿಲ್ಲ. ಬದಲಾದ ದಿನಮಾನಗಳಲ್ಲಿ ಮಕ್ಕಳಿಗೆ ಹೊಡೆದರೆ ಪಾಲಕರು ಶಾಲೆಗೆ ಬಂದು ರಗಳೆ ಮಾಡುತ್ತಾರೆ. ನಿಮ್ಮ ಮಕ್ಕಳನ್ನು ತಿದ್ದಿ ಭವಿಷ್ಯ ರೂಪಿಸುವ ಶಿಕ್ಷಕರ ಬಗ್ಗೆ ಗೌರವ ಇರಬೇಕು. ತಾಲೂಕಿನಲ್ಲಿ ಉತ್ತಮ ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದ ಅಭಿವೃದ್ದಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎಂದರು.
ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದೆ. ಬರುವ ದಿನಗಳಲ್ಲಿ ಹಂತ ಹಂತವಾಗಿ ಅದನ್ನು ನೀಗಿಸಲಾಗುವುದು. ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇದೆ. ಈಗಾಗಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಮಾತನಾಡಿ, ಖಾಸಗಿ ಶಾಲೆಗಳಿಗೆ ಸವಾಲು ಎನ್ನುವ ರೀತಿ ಸರ್ಕಾರಿ ಶಾಲೆಗಳ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಪ್ರತಿಭಾವಂತ ಶಿಕ್ಷಕರು ಎಲ್ಲಾದರೂ ಇದ್ದಾರೆಂದರೆ ಅದು ಸರ್ಕಾರಿ ಶಾಲೆಯಲ್ಲಿ ಮಾತ್ರ. ಎಲ್ಲ ಕ್ಷೇತ್ರ ಭ್ರಷ್ಟವಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರ ಮಾತ್ರ ತನ್ನ ಪಾವಿತ್ರ್ಯತೆ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳನ್ನು, ಎಸ್‌ಎಸ್‌ಎಲ್‌ಸಿ ಟಾಪರ್‌ಗಳನ್ನು ಸನ್ಮಾನಿಸಲಾಯಿತು.
ತಾಪಂ ಇಒ ನಾಗೇಶ್ ಬ್ಯಾಲಾಳ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತಾಲೂಕು ಜಿ.ಪರಮೇಶ್ವರಪ್ಪ, ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಜಗನ್ನಾಥ್, ಲಕ್ಷ್ಮಣ್ ಆರ್.ನಾಯ್ಕ, ಪ್ರೇಮಾಕುಮಾರಿ, ಜಿ.ಮಹಾಬಲೇಶ್ವರ, ಇ.ಎನ್.ಪ್ರಭು, ಸುಬ್ರಹ್ಮಣ್ಯ, ಗುರುರಾಜ್, ಪ್ರಸನ್ನ, ವಿಕ್ಟೋರಿಯಾ ಫಟಾರ್ಡೋ, ಶಾಲಿನಿ, ಬಿಇಒ ಪರಶುರಾಮಪ್ಪ, ಡಾ. ಅನ್ನಪೂರ್ಣಾ, ರಮೇಶ್ ಇತರರಿದ್ದರು.