ಹನೂರು: ಪಟ್ಟಣದ ಸಮೂಹ ಸಂಪನ್ಮೂಲ ಕೇಂದ್ರದ (ಬಿಆರ್‌ಸಿ) ಆವರಣದಲ್ಲಿ ಟ್ರೈನಿಂಗ್ ಲಾಗಿನ್ ವಿಚಾರವಾಗಿ ಇಬ್ಬರು ಶಿಕ್ಷಕರ ನಡುವೆ ಗಲಾಟೆ ನಡೆದಿದ್ದು, ಕೈ ಕೈ ಮಿಲಾಯಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಂಜೆ ವೇಳೆ ನಡೆದಿರುವ ಘಟನೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಶಿಕ್ಷಕ ರಾಜು ಹಾಗೂ ಬಿಆರ್‌ಸಿ ದಿನೇಶ್ ನಡುವೆ ಟ್ರೈನಿಂಗ್ ಲಾಗಿನ್ ವಿಚಾರವಾಗಿ ಪ್ರಾರಂಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ಬಳಿಕ ರಾಜು ಬಿಆರ್‌ಸಿ ದಿನೇಶ್ ಮೇಲೆ ಕೈ ಮಿಲಾಯಿಸಿದ್ದಾರೆ. ಈ ವೇಳೆ ಸಮೀಪದಲ್ಲಿದ್ದ ಇತರ ಶಿಕ್ಷಕರು ಸಮಾಧಾನಪಡಿಸಿ ಸ್ಥಳದಿಂದ ಕಳುಹಿಸಿದ್ದಾರೆ. ಈ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಶೈಕ್ಷಣಿಕ ವಲಯದಲ್ಲಿ ಮಾತ್ರವಲ್ಲದೇ ಸಾರ್ವಜನಿಕ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.