ಮೈಸೂರು: ಶಿಕ್ಷಕ ದಿನಾಚರಣೆ ಅಂಗವಾಗಿ ಅಭಿರುಚಿ ಕಲಾಬಳಗ, ಆಸಕ್ತಿ ಪ್ರಕಾಶನ, ಎನ್.ವಿ.ರಮೇಶ್ ಕಲಾಬಳಗದಿಂದ ಕುವೆಂಪುನಗರದಲ್ಲಿ ಮನೆ, ಮನೆ ಕವಿಗೋಷ್ಠಿ ಆಯೋಜಿಸಲಾಗಿತ್ತು.
ಕವಿಗೋಷ್ಠಿ ಹಾಗೂ ಅನುಭವ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಿದ ಬಳಗದ ಸಂಸ್ಥಾಪಕ ಎನ್.ವಿ.ರಮೇಶ್ ಮಾತನಾಡಿ, ಕವಿ, ಸಾಹಿತಿಗಳು ಮಾತ್ರವಲ್ಲದೇ ಸಾಮಾನ್ಯರು ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು. ತಮ್ಮ ಜೀವನದ ಅನುಭವ, ನೋಡಿದ ಸ್ಥಳ, ಮರೆಯಲಾಗದ ಘಟನೆಗಳನ್ನು ದಾಖಲಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಗೃಹಿಣಿ ಕುಸುಮಾ ಓಂಕಾರೇಶ್ವರ್, ಆಪ್ತ ಸಮಾಲೋಚಕಿ ಶಮಾ ಅಹ್ಮದ್, ಗಂಗಮ್ಮ ಅವರು ತಮ್ಮ ಜೀವನದ ಅನುಭವ, ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ನಿವೃತ್ತ ರಿಜಿಸ್ಟ್ರಾರ್ ಎ.ಎಸ್.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲರಾದ ಪದ್ಮಿನಿ ಹೆಗಡೆ, ಎಂ.ಎ.ಕುಮಾರ್, ನಿವೃತ್ತ ಶಿಕ್ಷಕರಾದ ಸುಮತಿ, ಸುಬ್ರಹ್ಮಣ್ಯ, ಕೆರೋಡಿ ಲೋಕಾಕ್ಷಿ, ಲಾವಣ್ಯ, ಶುಭಶ್ರೀ, ಲೇಖಕಿ ಹೇಮಾ ರಮೇಶ್, ಟಿ.ತ್ಯಾಗರಾಜ್, ಸಿ.ಎನ್.ರಮೇಶ್ ಇತರರು ಇದ್ದರು.
ರಾಜಗೋಪಾಲಾಚಾರ್ಯ ಅಣಕು ಗೀತೆ ಹಾಡಿದರೆ, ಎಂ.ಆರ್.ಆನಂದ್, ರಾಮಚಂದ್ರ, ಯಶೋಧಾ ರಾಮಕೃಷ್ಣ, ನೇತ್ರಾವತಿ, ಭಾಗ್ಯಲಕ್ಷ್ಮಿ, ಪದ್ಮ ಕವಿತೆಗಳನ್ನು ವಾಚಿಸಿದರು.