ರಾಯಚೂರು: ಜಿಲ್ಲೆಯಲ್ಲಿ ಸೆ.3ರಂದು ನಡೆಯಲಿರುವ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಯಾವುದೇ ಲೋಪದೋಷಗಳಿಲ್ಲದಂತೆ ಕಟ್ಟುಕಟ್ಟಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ಅಕಾರಿಗಳಿಗೆ ಸೂಚಿಸಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರೀಕ್ಷೆ ನಡೆಯುವ ಪ್ರತಿಯೊಂದು ಕೊಠಡಿಯಲ್ಲಿ ಸಿಸಿಟಿವಿ ಅಳವಡಿಸಬೇಕು. ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.
ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುನ್ನ ತಪಾಸಣೆಗೆ ಒಳಪಡಿಸಬೇಕು. ಪರೀಕ್ಷಾ ಕೇಂದ್ರಕ್ಕೆ ನಿಯೋಜಿತ ಸಿಬ್ಬಂದಿ ಹೊರತುಪಡಿಸಿ ಇತರರನ್ನು ಪ್ರವೇಶಿಸದಂತೆ ನೋಡಿಕೊಳ್ಳಬೇಕು. 200 ಮೀಟರ್ ಸುತ್ತಮುತ್ತಲ ಪ್ರದೇಶದಲ್ಲಿನ ಜಿರಾಕ್ಸ್ ಅಂಗಡಿಗಳನ್ನು ಬಂದ್ ಮಾಡಿಸಬೇಕು.
ಪರೀಕ್ಷೆ ಆರಂಭಕ್ಕೆ 30 ನಿಮಿಷಗಳ ಮುಂದೆ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಹಾಜರಿರಬೇಕು. ನಂತರ ಪರೀಕ್ಷೆ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದಿಂದ ಹೊರಗೆ ಹೋಗಲು ಅವಕಾಶ ನೀಡಬಾರದು. ಮೊಬೈಲ್, ಕೈಗಡಿಯಾರ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಪರೀಕ್ಷಾ ಕೊಠಡಿ ಒಳಗೆ ಬಿಡಬಾರದು ಎಂದು ಡಾ.ಕೆ.ಆರ್.ದುರಗೇಶ ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ, ಸಹಾಯಕ ಆಯುಕ್ತೆ ಮಹೆಬೂಬಿ, ಡಿಡಿಪಿಐ ಸುರೇಶ ಹುಗ್ಗಿ, ಜಿಲ್ಲಾ ಶಿಕ್ಷಣಾಕಾರಿ ಆರ್.ಇಂದಿರಾ, ಕ್ಷೇತ್ರ ಶಿಕ್ಷಣಾಕಾರಿ ಚಂದ್ರಶೇಖರ ಭಂಡಾರಿ ಹಾಗೂ ವಿವಿಧ ಇಲಾಖೆ ಅಕಾರಿಗಳು ಉಪಸ್ಥಿತರಿದ್ದರು.