ಜಿಲ್ಲೆ

ಶಿಕ್ಷಕ, ವೈದ್ಯ ಸಮಾಜದ ಕಣ್ಣುಗಳು

ಹಲಗೂರು: ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರು ಹಾಗೂ ರೋಗಿಗಳಿಗೆ ಉತ್ತಮ ಸೇವೆ ನೀಡುವ ವೈದ್ಯರು ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ವೈದ್ಯಾಧಿಕಾರಿ ಡಾ.ಶಿವಲಿಂಗಯ್ಯ ತಿಳಿಸಿದರು.

ಬೃಹನ್ ಮಠದಲ್ಲಿ ಲೀಲಾ ನಾಗರಾಜಪ್ಪ ಎಜುಕೇಷನಲ್ ಟ್ರಸ್ಟ್‌ನ ವಿದ್ಯಾಧಾರೆ ಪ್ರೀ ಸ್ಕೂಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ವಿದ್ಯೆ ತುಂಬಾ ಮುಖ್ಯ. ವಿದ್ಯೆ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಸಮಾಜದ ಸತ್ಪ್ರಜೆಯನ್ನಾಗಿ ಮಾಡಿ ಎಂದರು.

ಕೆಂಪಯ್ಯನ ದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸುಂದ್ರಪ್ಪ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಸುಬ್ಬಣ್ಣ ಅವರ ಸ್ಮರಣಾರ್ಥ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಂದ್ರಪ್ಪ ಅವರಿಗೆ ಶ್ರೀ ಸುಬ್ಬಣ್ಣ ಪ್ರಶಸ್ತಿ, ಶ್ರೀ ಬಸವಗೌಡರ ಸ್ಮರಣಾರ್ಥ ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಶಿವಲಿಂಗಯ್ಯ ಅವರಿಗೆ ಬಸವೇಗೌಡ ಪ್ರಶಸ್ತಿ ನೀಡಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆ, ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನಿವೃತ್ತ ಶಿಕ್ಷಕ ನಾಗರಾಜು, ಶಾಲೆಯ ಸಂಸ್ಥಾಪಕ ಹಾಗೂ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಚ್.ವಿ.ಅಶ್ವಿನ್ ಕುಮಾರ್, ಪ್ರಾಂಶುಪಾಲೆ ಎಚ್.ವಿ.ಶ್ವೇತಾ ಕುಮಾರಿ, ಶಿಕ್ಷಕರಾದ ಸೌಮ್ಯಾ, ಶೃತಿ, ಮಧು, ಸಿಬ್ಬಂದಿ ಮಾಲಾ, ಲಕ್ಷ್ಮೀ, ಶರತ್ ಇದ್ದರು.