ಜಿಲ್ಲೆ

ಶಿಕ್ಷಕ ಬದಲಾವಣೆಯ ಪ್ರೇರಕ

ಕಲಬುರಗಿ: ಪ್ರತಿ ಕ್ಷೇತ್ರದ ಏಳಿಗೆಗೆ ಶಿಕ್ಷಣವೇ ಮೂಲ ಕಾರಣವಾಗಿದ್ದು, ಅದಕ್ಕೆ ಶಿಕ್ಷಕರೇ ಬುನಾದಿ ಆಗಿದ್ದಾರೆ. ಬದಲಾವಣೆಯ ಬುನಾದಿ ಆದ ಮಕ್ಕಳನ್ನು ಭವಿಷ್ಯದ ನಾಗರೀಕರನ್ನಾಗಿ ನಿರ್ಮಿಸುವ ಜೀವನದ ಅತ್ಯಂತ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸುಜಯ ಎಜುಕೇಷನಲ್ ಹಾಗೂ ವೆಲ್ಫೇರ್ ಸೊಸೈಟಿ, ಅಂತರAಗ ಸಾಂಸ್ಕೃತಿಕ ಸೇವಾ ಸಂಸ್ಥೆ, ಸಂಗಮ ಎಜುಕೇಷನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ಮತ್ತು ಬಳ್ಳಾರಿಯ ಕಾಂಡ್ರಾ ಎಜುಕೇಷನಲ್ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಕಲಿಕಾ ಸ್ನೇಹಿ ಶಿಕ್ಷಕ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಪ್ರಸ್ತುತ ವಿಶ್ವಗುರು ಭಾರತ ನಿರ್ಮಾಣ ಎನ್ನುವುದು ಸಾಧ್ಯವಿದ್ದರೆ ಅದು ಶಿಕ್ಷಕರಿಂದ ಮಾತ್ರ. ಸಾವಿತ್ರಿಬಾಯಿ ಫುಲೆ, ವಿಶ್ವಗುರು ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದಲೇ ಇಂದು ಎಲ್ಲಡೆ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶ ದೊರೆಯುತ್ತಿವೆ ಎಂದರು.

ಶಾಸಕಿ ಕನೀಜ್ ಫಾತಿಮಾ ಮಾತನಾಡಿ, ಉತ್ತಮ ಬೋಧಿಸಿದ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಕೊಡುತ್ತಿರುವುದು ಶ್ಲಾಘನೀಯ ಕೆಲಸ. ಪ್ರಶಸ್ತಿ ಪಡೆದವರು ಸೇರಿ ಎಲ್ಲರೂ ಬೋಧಿಸಿದ್ದಾರೆ. ಪ್ರತಿ ಪ್ರಶಸ್ತಿ ಇಡೀ ಶಿಕ್ಷಕ ಸಮುದಾಯಕ್ಕೆ ನೀಡಿದಂತೆ ಎಂದರು.

ಪೊಲೀಸ್ ಕಮಿಷನರ್ ಆರ್.ಚೇತನ್‌ಕುಮಾರ ಮಾತನಾಡಿದರು.
ಸರ್ಕಾರಿ ಮತ್ತು ಖಾಸಗಿ ಶಾಲಾಕಾಲೇಜುಗಳ ಪ್ರಾಥಮಿಕ, ಪ್ರೌಢಶಾಲೆ, ಉಪನ್ಯಾಸಕರು ಸೇರಿ ೧೫೧ ಬೋಧಕರಿಗೆ ಕಲಿಕಾ ಸ್ನೇಹಿ ಶಿಕ್ಷಕ ಪುರಸ್ಕಾರ ಪ್ರದಾನ ಮಾಡಲಾಯಿತು. ಸರ್ಕಾರಿ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶಿಕ್ಷಣ ತಜ್ಞ ಸತೀಶಕುಮಾರ ಕಾಂಡ್ರೆ, ಡಿಡಿಪಿಯು ಶಿವಶರಣಪ್ಪ ಮುಳೆಗಾಂವ, ಶರಣಬಸವೇಶ್ವರ ವಿಶ್ವವಿದ್ಯಾಲಯದ ಡೀನ್ ಲಕ್ಷ್ಮೀ ಮಾಕಾ, ಜವಾಹರ ಶಿಕ್ಷಣ ಣ ಸಂಸ್ಥೆ ಮುಖ್ಯಸ್ಥ ಎ.ಸಿ.ಕಾಡ್ಲೂರ, ಗುಲ್ಬರ್ಗಾ ವಿವಿ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ರಮೇಶ ಲಂಡನಕರ್, ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷಜೆ.ಮಲ್ಲಪ್ಪ, ಕಲ್ಯಾಣ ಕರ್ನಾಟಕ ಸರ್ಕಾರಿ ಪಿಯು ಉಪನ್ಯಾಸಕ ಸಂಘದ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ, ಪ್ರಮುಖರಾದ ಪ್ರೊ.ನೀಲಕಂಠ ಕಣ್ಣಿ, ಶರಣಪ್ಪ ಸೈದಾಪೂರ, ಸುನಿಲ್‌ಕುಮಾರ ವಂಟಿ ಇತರರಿದ್ದರು.