ಶಿಕಾರಿಪುರ: ಕರ್ನಾಟಕ ರಾಜ್ಯಹೆದ್ದಾರಿ ಯೋಜನೆ (ಕೆಶಿಪ್) ಶಿಕಾರಿಪುರ ಕಚೇರಿಯನ್ನು ಕೊಳ್ಳೆಗಾಲ ಸಮೀಪದ ಹನೂರಿಗೆ ಸ್ಥಳಾಂತರಿಸಿ ಆದೇಶ ಹೊರಡಿಸಿದೆ. ತಾಲೂಕಿನಲ್ಲಿ ಹಾದುಹೋಗಿರುವ ಎರಡು ಹೆದ್ದಾರಿಗಳ ಕೆಲಸ ಮುಗಿದ ಮೇಲೆ ಕೆಶಿಪ್‌ಗೆ ಯಾವುದೇ ರೀತಿಯ ಕೆಲಸ ಇರಲಿಲ್ಲ. ಜನರಿಂದ ಸದಾ ತುಂಬಿರುತ್ತಿದ್ದ ಈ ಕಚೇರಿ ಇತ್ತೀಚೆಗೆ ಇದ್ದವರಿಗೇ ಕೆಲಸವಿಲ್ಲದೆ ಬಿಕೋ ಎನ್ನುತ್ತಿತ್ತು. ಈಗ ಮಲೆಮಹದೇಶ್ವರ ಬೆಟ್ಟದಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ಕೆಶಿಪ್ ಕಚೇರಿಯನ್ನು ಹನೂರಿಗೆ ವರ್ಗಾವಣೆ ಮಾಡಿ ಲೋಕೋಪಯೋಗಿ ಇಲಾಖೆಯ ಅೀನ ಕಾರ್ಯದರ್ಶಿ ರಘುನಾಥ ಗೌಡ ಎನ್. ಪಾಟೀಲ್ ಆದೇಶ ಹೊರಡಿಸಿದ್ದಾರೆ. ತಡಸ- ಶಿವಮೊಗ್ಗ ಮತ್ತು ಬೈಂದೂರು ರಾಜ್ಯ ಹೆದ್ದಾರಿಗಳ ಕಾಮಗಾರಿ ನಡೆಯುತ್ತಿರುವಾಗ ಶಿಕಾರಿಪುರದಲ್ಲಿ ಕೆಶಿಪ್ ಕಚೇರಿ ತೆರೆಯ ಲಾಯಿತು. ಹೆದ್ದಾರಿ ಕೆಲಸ ಪೂರ್ಣಗೊಂಡು ನಾಲ್ಕೆದು ವರ್ಷಗಳು ಕಳೆದಿವೆ. ಆ ಕಾರಣದಿಂದ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕೊಳ್ಳೆಗಾಲ ಸಮೀಪದ ಹನೂರು ತಾಲೂಕು ರಚನೆಯಾಗಿ 6 ವರ್ಷಗಳು ಕಳೆದರೂ ಇಲ್ಲಿ ಪಿಡಬ್ಲುಡಿ ಕಚೇರಿ ಇರಲಿಲ್ಲ. ಕೊಳ್ಳೆಗಾಲ ಉಪವಿಭಾಗದಿಂದಲೇ ರಸ್ತೆ, ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲಾಗುತ್ತಿತ್ತು. ಆದ್ದರಿಂದ ಇದೀಗ ಶಿಕಾರಿಪುರ ಕೆಶಿಪ್ ಕಚೇರಿಯನ್ನು ಹನೂರಿಗೆ ಸಿಬ್ಬಂದಿ ಸಹಿತ ವರ್ಗಾಯಿಸಲಾಗಿದೆ. ಈಗಾಗಲೇ ಬೆಳಗಾವಿ ಕೆಶಿಪ್ ಕಚೇರಿಯನ್ನು ಹಾಸನಕ್ಕೆ, ರಾಯಚೂರು ಕೆಶಿಪ್ ಕಚೇರಿಯನ್ನು ಕೆ.ಆರ್.ಪೇಟೆಗೆ, ಶಿವಮೊಗ್ಗ ಕೆಶಿಪ್ ಕಚೇರಿಯನ್ನು ರಾಣೆಬೆನ್ನೂರಿಗೆ ಸ್ಥಳಾಂತರಿಸಿದಂತೆಯೇ ಯೋಜನೆ ಮುಗಿದ ನಂತರ ಶಿಕಾರಿಪುರದ ಕೆಶಿಪ್ ಕಚೇರಿಯನ್ನು ಹನೂರಿಗೆ ಸ್ಥಳಾಂತರಿಸಲಾಗಿದೆ ಎನ್ನುತ್ತಾರೆ ಅಕಾರಿಗಳು.
ಅಭಿವೃದ್ಧಿ ದೃಷ್ಟಿಯಿಂದ ಶಿವಮೊಗ್ಗ-ತಡಸ ರಾಜ್ಯ ಹೆದ್ದಾರಿಯ ಕೆಲಸ ನಡೆಯುವಾಗ ಶಿಕಾರಿಪುರದಲ್ಲಿ ಕಚೇರಿ ತೆರೆಯಲಾಗಿತ್ತು. ಶಿಕಾರಿಪುರ ಕೇಂದ್ರ ಸ್ಥಾನ ಆದ್ದರಿಂದ ಇಲ್ಲಿ ಕೆಶಿಪ್ ಕಚೇರಿ ಆರಂಭಿಸಿದ್ದು ಅನುಕೂಲವಾಗಿತ್ತು. ಈಗ ದಿಢೀರನೆ ಕೆಶಿಪ್ ಕಚೇರಿ ಸ್ಥಳಾಂತರ ಮಾಡಿರುವುದು ಸರಿಯಲ್ಲ. ಕೆ.ಎಸ್.ಗುರುಮೂರ್ತಿ, ಮಾಜಿ ಅಧ್ಯಕ್ಷರು, ಎಂಎಡಿಬಿ, ಶಿಕಾರಿಪುರ.