ಶಿಕಾರಿಪುರ: ವಾಹನ ಸವಾರರಿಗೆ ಹಲವು ದಿನಗಳಿಂದ ಸಮಸ್ಯೆಯಾಗಿ ಪರಿಣಮಿಸಿದ್ದ ರಸ್ತೆಯ ಗುಂಡಿಗಳನ್ನು ಮುಚ್ಚಲು ಇದೀಗ ಪುರಸಭೆ ಮುಂದಾಗಿದೆ. ಪಟ್ಟಣದ ಹೊನ್ನಾಳಿ ರಸ್ತೆಯಿಂದ ಆರಂಭಗೊಂಡು ಶಿವಮೊಗ್ಗ ಹೆದ್ದಾರಿ ತಲುಪುವವರೆಗೂ ಸಾಕಷ್ಟು ಪ್ರಮಾಣದಲ್ಲಿ ರಸ್ತೆ ಹಾಳಾಗಿತ್ತು. ದೊಡ್ಡ ಗುಂಡಿಗಳಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಈಗಲೂ ಭಾರಿ ವಾಹನಗಳು ಹೊನ್ನಾಳಿ ಕಡೆಯಿಂದ ಬಂದರೆ ರುದ್ರಭೂಮಿಯ ಎದುರು ನಿರ್ಮಾಣವಾದ ಕೆಎಚ್‌ಬಿ ಕಾಲನಿಯ ಬೈಪಾಸ್ ರಸ್ತೆ ಮೂಲಕ ಹಾದು ಮುಂದೆ ಪಟ್ಟಣವನ್ನು ಬಿಟ್ಟು ಪೌರವಿಹಾರದ ಹತ್ತಿರ ರಾಜ್ಯ ಹೆದ್ದಾರಿಯನ್ನು ಸೇರುತ್ತಿವೆ. ಶಿವಮೊಗ್ಗ ಕಡೆಯಿಂದ ಬರುವಂತಹ ಸರಕು ಸಾಗಣೆ ವಾಹನಗಳು ಹೊನ್ನಾಳಿ ಕಡೆಗೆ ಹೋಗಲು ಇದೇ ಪೌರವಿಹಾರದ ಹತ್ತಿರ ಬಲಗಡೆ ತಿರುಗಿ ತಾಯಿ-ಮಕ್ಕಳ ಆಸ್ಪತ್ರೆಯ ಮುಂಭಾಗದಿಂದ ಬೈಪಾಸ್ ರಸ್ತೆ ಮೂಲಕ ಹೊನ್ನಾಳಿ ರಸ್ತೆ ಸೇರುತ್ತವೆ. ಇದೇ ರಸ್ತೆಯಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ಇರುವ ಕಾರಣ ರಸ್ತೆ ದುರಸ್ತಿ ಮಾಡಲು ಸಾರ್ವಜನಿಕರು ಹಾಗೂ ವಿವಿಧ ಸಂಘಸಂಸ್ಥೆಗಳು ಪುರಸಭೆಗೆ ಒತ್ತಾಯಿಸಿದ್ದರು. ಇದೀಗ ಪುರಸಭೆ ಜಲ್ಲಿ ಮಿಶ್ರಣವನ್ನು ಹಾಕಿ ಗುಂಡಿಗಳನ್ನು ಮುಚ್ಚಲು ಆರಂಭಿಸಿದೆ. ಮಳೆಗಾಲದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಆರಂಭಿಸಿರುವುದರಿಂದ ಮತ್ತೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಸದ್ಯಕ್ಕೆ ವೆಟ್‌ಮಿಕ್ಸ್ ಬಳಕೆ ಶಿಕಾರಿಪುರದ ಹೊನ್ನಾಳಿ ರಸ್ತೆ ಕಡೆಯಿಂದ ಬೈಪಾಸ್ ರಿಪೇರಿ ಕೆಲಸ ಪ್ರಾರಂಭಿಸಿದ್ದೇವೆ. ವೆಟ್‌ಮಿಕ್ಸ್ ಹಾಕಿ ಗುಂಡಿಗಳನ್ನು ಮುಚ್ಚುತ್ತಿದ್ದು, ಸ್ವಲ್ಪ ಮಳೆ ನಿಂತ ಮೇಲೆ ಡಾಂಬರೀಕರಣ ಮಾಡಲಾಗುವುದು. ಇದರಿಂದ ಈ ಭಾಗದಲ್ಲಿ ಸಂಚರಿಸುವ ಸವಾರರಿಗೆ, ದೊಡ್ಡ ಸರಕು ಸಾಗಣೆ ವಾಹನಗಳಿಗೆ ಅನುಕೂಲವಾಗಲಿದೆ. ಮಳೆಯ ಕಾರಣದಿಂದ ಕೆಲಸ ಸ್ವಲ್ಪ ನಿಧಾನವಾಗುತ್ತಿದೆ ಎನ್ನುತ್ತಾರೆ ಪುರಸಭೆಯ ಅಧಿಕಾರಿಗಳು.