ಮೈಸೂರು: ಕನ್ನಡ ಭಾಷೆಗೆ ದೊರೆತ ಶಾಸ್ತ್ರೀಯ ಸ್ಥಾನಮಾನದ ಪ್ರಯೋಜನ ಪಡೆದುಕೊಳ್ಳಲು ರಾಜ್ಯ ಸರ್ಕಾರ ಏಕೆ ಆಸಕ್ತಿ ತೋರುತ್ತಿಲ್ಲ ಎಂದು ಸಮ್ಮೇಳನಾಧ್ಯಕ್ಷ, ಹಿರಿಯ ಲೇಖಕ ಎಲ್.ಶಿವಲಿಂಗಪ್ಪ ನೇರವಾಗಿ ಪ್ರಶ್ನಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದ ವತಿಯಿಂದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದರು.
ಶಾಸ್ತ್ರೀಯ ಸ್ಥಾನಮಾನದಿಂದ ಕನ್ನಡಕ್ಕೆ ಪ್ರಪಂಚದೆಲ್ಲೆಡೆ ಮನ್ನಣೆ, ಹೆಚ್ಚಿನ ಆರ್ಥಿಕ ನೆರವು, ಕೇಂದ್ರೀಯ ವಿವಿ ಮತ್ತು ವಿದೇಶದ ವಿವಿಗಳಲ್ಲಿ ಕನ್ನಡ ಕಲಿಕೆಗೆ ಅವಕಾಶ, ಕನ್ನಡ ಪೀಠಗಳ ಸ್ಥಾಪನೆ ಸೇರಿದಂತೆ ವಿವಿಧ ಪ್ರಯೋಜನಗಳು ದೊರೆಯುತ್ತವೆ. ಆದರೆ, ಅದನ್ನು ಪಡೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರವೇ ಅನೇಕ ಮಾರ್ಗಸೂಚಿ ಮೂಲಕ ತಡೆಯೊಡ್ಡುತ್ತಿದೆಯೇ? ಕನ್ನಡ ನಾಡಿನ ವಿದ್ವನ್ಮಣಿಗಳು, ಭಾಷಾಬಲ್ಲಿದರು ತಡೆಯೊಡ್ಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ದೇವಭಾಷೆಯನ್ನು ಪ್ರೀತಿಸುವವರು, ಇಂಗ್ಲಿಷ್ ವ್ಯಾಮೋಹಿಗಳು, ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ಶಾಸ್ತ್ರೀಯ ಸ್ಥಾನಮಾನದ ಲಾಭ ಪಡೆದುಕೊಳ್ಳುವಲ್ಲಿ ಕನ್ನಡ ಸೋತಿದೆ. ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ 15 ವರ್ಷ ಕಳೆದರೂ ಸುವ್ಯವಸ್ಥಿತ ಕಚೇರಿ ಮಾಡಲಾಗಿಲ್ಲ. ಅನುದಾನವನ್ನೂ ಸದ್ಬಳಕೆ ಮಾಡಿಕೊಂಡಿಲ್ಲ ಎಂದು ಕಿಡಿಕಾರಿದರು.
ಓಲೈಕೆಗಾಗಿ ಮಾಡಿರುವ ಅಧ್ಯಯನ ಪೀಠಗಳು, ನಿಗಮಗಳು ನಿತ್ರಾಣವಾಗಿವೆ. ಅವುಗಳು ಕೆಲವರಿಗೆ ವಿಶ್ರಾಂತಿ ತಾಣವಾಗಿವೆ ಎಂದು ಕುಟುಕಿದರು.
ಕನ್ನಡ ಆಡಳಿತ, ವ್ಯವಹಾರಿಕ ಭಾಷೆಯಾಗಿಸುವ ಗೋಕಾಕ್ ವರದಿ, ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿಕೊಡುವ ಡಾ.ಸರೋಜಿನಿ ಮಹಿಷಿ ವರದಿ ಕಗ್ಗತ್ತಲೆಯ ಕಪಾಟಿನಲ್ಲಿ ಜಿರಳೆಗಳ ಆಹಾರವಾಗಿವೆ. ಸರ್ಕಾರಿ ಕನ್ನಡ ಶಾಲೆಯಲ್ಲಿ ಪರಿಸ್ಥಿತಿಯಂತೂ ಹೇಳುವ ಹಾಗೆ ಇಲ್ಲ. ಕನ್ನಡ ಓದುವವರ ಸಂಖ್ಯೆ ಕಡಿಮಯಾಗಿದೆ. ಕನ್ನಡವೇ ಬಾರದ ಮಕ್ಕಳೇ ಮುಂದಿನ ಪ್ರಜೆಗಳಾಗುವುದರಿಂದ ಕನ್ನಡದ ಗತಿ ಏನು? ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಚಾಟಿ ಬೀಸಿದರು.
ಸಂಸ್ಕೃತವನ್ನು ಜಗತ್ತಿನಾದ್ಯಂತ ಮಾತ್ರವಲ್ಲ, ಭಾರತದಲ್ಲೇ ಮಾತೃಭಾಷೆಯನ್ನಾಗಿ ಮಾಡಿಕೊಂಡವರು ಬೆರಣಿಕೆಯಷ್ಟು ಜನರೂ ಇಲ್ಲ. ಆದರೆ, ಅದಕ್ಕೆ ಕೋಟಿಗಟ್ಟಲೆ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಕನ್ನಡ ಭಾಷಾ ಬೆಳವಣಿಗೆಗೆ ಲಕ್ಷಗಳಷ್ಟು ಹಣವನ್ನು ಮಾತ್ರ ನೀಡುತ್ತಿದೆ. ಹೀಗಿರುವಾಗ ಕನ್ನಡಕ್ಕೆ ದೊರೆತ ಶಾಸ್ತ್ರೀಯ ಸ್ಥಾನಮಾನ ಉಳಿಯವುದೇ? ಕನ್ನಡ ಮುಂದೊಂದು ದಿನ ಮೃತಭಾಷೆ ಆಗುವುದಿಲ್ಲವೇ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡ ದುಸ್ಥಿತಿಯ ಕುರಿತು ಕನ್ನಡ ಸಾಹಿತ್ಯ ಪರಿಷತ್ ಧ್ವನಿಯೆತ್ತಿ ಸರ್ಕಾರದ ಗಮನಕ್ಕೆ ತರಬಹುದಾಗಿತ್ತು. ಆದರೆ, ಅದನ್ನು ಈ ವರೆಗೂ ಗಂಭೀರವಾಗಿ ಮಾಡಿಲ್ಲ. ಕನ್ನಡದ ಚಿಂತನೆಯುಳ್ಳ ಅಭಿವೃದ್ಧಿ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಇತ್ಯಾದಿ ಸಂಸ್ಥೆಗಳೂ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಡಾ.ಪ್ರಧಾನ ಗುರುದತ್ ಮಾತನಾಡಿ, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಬೆಳವಣಿಗೆಗೆ ನಿರಾಸಕ್ತಿ ತೋರಲಾಗುತ್ತಿದೆ. ಶಾಸ್ತ್ರೀಯ ತಮಿಳು ಅಧ್ಯಯನ ಕೇಂದ್ರಕ್ಕೆ ಕೇಂದ್ರ ಸರ್ಕಾರ ನೂರು ಕೋಟಿ ರೂ. ಅನುದಾನ ಕೊಟ್ಟಿದೆ. ಅದೇ ಕನ್ನಡ ಕೇಂದ್ರಕ್ಕೆ ಬರೀ 2 ಕೋಟಿ ರೂ. ನೀಡಿದೆ. ಕನ್ನಡ ಭಾಷಾ ಬೆಳವಣಿಗೆಗೆ ಗಮನ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ ಮಾತನಾಡಿ, ನಾಡು-ನುಡಿ ಉಳಿಸಲು ಪ್ರತಿಯೊಬ್ಬ ಕನ್ನಡಿಗರೂ ಪ್ರಯತ್ನಿಸಬೇಕು. ಇದರೊಂದಿಗೆ ಕನ್ನಡ ಅಭಿಮಾನವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ನಿವೃತ್ತ ತಹಸೀಲ್ದಾರ್ ಡಾ.ವಿ.ರಂಗನಾಥ್ ಅವರು ಕೃಷ್ಣರಾಜ ವಿಧಾನಸಭಾ ಕ್ಷೇತ್ರ ದರ್ಶನ ಕುರಿತು ಉಪನ್ಯಾಸ ನೀಡಿದರು.
ಕಸಪಾ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ನಗರಾಧ್ಯಕ್ಷ ಕೆ.ಎಸ್.ಶಿವರಾಮು, ಸಮ್ಮೇಳನದ ಪ್ರಧಾನ ಸಂಚಾಲಕ ಎಂ. ಚಂದ್ರಶೇಖರ್, ಚುಟುಕು ಸಾಹಿತಿ ಡಾ.ಎಂ.ಜಿ.ಆರ್.ಅರಸ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಇನ್ನಿತರರು ಉಪಸ್ಥಿತರಿದ್ದರು