ಜಿಲ್ಲೆ

ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಸ್ವಾಯತ್ತತೆ ಸಿಗಲಿ

reportermys

ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತ ಸ್ಥಾನಮಾನ ನೀಡಬೇಕು ಎಂದು ಹಿರಿಯ ಸಾಹಿತಿ ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ ಆಗ್ರಹಿಸಿದರು.

ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ(ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಸೋಮವಾರ ಆಯೋಜಿಸಿದ್ದ 14ನೇ ಶಾಸ್ತ್ರೀಯ ಕನ್ನಡ ಮಾನ್ಯತಾ ದಿನಾಚರಣೆಯಲ್ಲಿ ಮಾತನಾಡಿದರು.

ಸಿಐಐಎಲ್‌ಗೆ ದೇಶಾದ್ಯಂತ ಇರುವ ವಿವಿಧ ಭಾಷೆಗಳ ಕುರಿತು ಕೆಲಸ ಮಾಡಬೇಕಾದ ದೊಡ್ಡ ಹೊಣೆಗಾರಿಕೆ ಇದೆ. ಇದರಿಂದಾಗಿ ಕನ್ನಡ ಭಾಷಾ ಕೆಲಸಕ್ಕೆ ಆದ್ಯತೆ ನೀಡುವುದು ಕಷ್ಟಕರವಾಗಲಿದೆ. ಆದ್ದರಿಂದ ಕನ್ನಡ ಕೇಂದ್ರಕ್ಕೆ ಸ್ವಂತ ಅಸ್ತಿತ್ವದ ಅಗತ್ಯ ಇದೆ. ಸ್ವತಂತ್ರ ಕಾರ್ಯ ನಿರ್ವಹಣೆಯಿಂದ ಮಾತ್ರ ಗುಣಾತ್ಮಕ ಕೆಲಸಗಳು ಹೆಚ್ಚಾಗಲಿವೆ ಎಂದರು.


ಶಾಸ್ತ್ರೀಯ ತಮಿಳು ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಂತ ಅಸ್ತಿತ್ವ ದೊರೆತ ಬಳಿಕ ಆ ಭಾಷೆಯ ಕುರಿತು ಉತ್ತಮ ಕೆಲಸಗಳು ಆಗಿವೆ. ಆದರೆ, ಕನ್ನಡಿಗರು ಆಲಸಿಗಳು ಎನ್ನುವಂತಾಗಿದೆ. ಆದ್ದರಿಂದ ಪ್ರತ್ಯೇಕ ಆಡಳಿತ ವರ್ಗ, ಸಿಬ್ಬಂದಿ, ಸಂಶೋಧಕರು, ಬೋಧಕರನ್ನು ಕಲ್ಪಿಸಿಕೊಡಲು ಈ ಕೇಂದ್ರಕ್ಕೆ ಸ್ವಾಯತ್ತೆ ನೀಡಬೇಕು. ಇದು ಬೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಹೇಳಿದರು.


ಈ ಕೇಂದ್ರದಿಂದ ಕನ್ನಡ ಭಾಷಾ ಕೆಲಸಗಳು ಮತ್ತು ಕೃತಿಗಳ ಬಿಡುಗಡೆ ಕಾರ್ಯಗಳು ವೇಗದಿಂದ ಆಗುತ್ತಿಲ್ಲ. ಇದರ ಹೊರತಾಗಿಯೂ ಉತ್ತಮ ಕೆಲಸಗಳು ನಡೆಯುತ್ತಿವೆ. ಆದರೆ, ಇದು ಸಾಲದು. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.

ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಬಿ. ಶಿವರಾಮಶೆಟ್ಟಿ ಮಾತನಾಡಿ, ದಾಖಲೀಕರಣ, ಸಂಶೋಧನೆ, ಪ್ರಸರಣ ಮತ್ತು ಬೋಧನೆ ಎಂಬ ನಾಲ್ಕು ಆಯಾಮದಲ್ಲಿ ಕೇಂದ್ರ ಕಾರ್ಯನಿರ್ವಹಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಜಾನಪದ ಗೀತೆಗಳನ್ನು 30 ದಿನಗಳ ಕಾಲ ಹಾಡಿಸಿ ದೃಶ್ಯ ಮತ್ತು ಶ್ರವ್ಯ ಮೂಲಕ ಶಾಸ್ತ್ರೀಯವಾಗಿ ದಾಖಲೀಕರಣ ಮಾಡಲಾಗಿದೆ. 2016ರಿಂದ 2021ರ ವರೆಗೆ 31 ಸಂಶೋಧನೆ ಮಾಡಲಾಗಿದೆ. ಇನ್ನೂ 13 ಯೋಜನೆಗಳನ್ನು ರೂಪಿಸಿದ್ದು, ಕಾಲಮಿತಿಯಲ್ಲಿ ಅದನ್ನೂ ಮುಗಿಸಲಾಗುವುದು ಎಂದರು.

ಆನ್‌ಲೈನ್ ಮೂಲಕ ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ, ಕೇಂದ್ರದ ವತಿಯಿಂದ ಶಾಸ್ತ್ರೀಯ ಕನ್ನಡದ ಕೃತಿಗಳನ್ನು ಇತರ ಭಾಷೆಗಳಿಗೆ ಅನುವಾದ ಮಾಡಬೇಕು. ಇದರೊಂದಿಗೆ ದೇಶ-ವಿದೇಶದಲ್ಲಿ ಕನ್ನಡದ ಅಸ್ಮಿತೆ ಪಸರಿಸಬೇಕು ಎಂದರು.

‘ಸೊಲ್ಲರಿಮೆ’ ಸುದ್ದಿಪತ್ರಿಕೆ, ‘ಉಲಿ ಉಯ್ಯಲೆ’ ಬಾನುಲಿ ಕಾರ್ಯಕ್ರಮ, ‘ಅರಿವ ತೇಜದಿ’ ಬಾಹ್ಯ ಸಂಶೋಧನಾ ಯೋಜನೆ, ಶಾಸ್ತ್ರೀಯ ಕನ್ನಡ; ಸ್ಥಾವರ ಜಂಗಮ ‘ದೇಸಿಯೊಳ್ ಪುಗುವುದು’ ಪ್ರಚಾರೋಪನ್ಯಾಸ ಮಾಲಿಕೆಗೆ ಚಾಲನೆ ನೀಡಲಾಯಿತು. ವಡ್ಡಾರಾಧನೆ; ಅಧ್ಯಯನ ಸಂಪುಟ ಬಿಡುಗಡೆಗೊಳಿಸಲಾಯಿತು.

ಸಿಐಐಎಲ್ ನಿವೃತ್ತ ಪ್ರವಾಚಕರು ಹಾಗೂ ಸಂಶೋಧನಾಧಿಕಾರಿಗಳಾದ ಪ್ರೊ.ಭ.ಮಲ್ಲಿಕಾರ್ಜುನ್, ಡಾ.ಎಂ.ಬಾಲಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರಮೋಹನ್, ಶಾಸ್ತ್ರೀಯ ಭಾಷೆಗಳ ವಿಭಾಗ ಮುಖ್ಯಸ್ಥ ಪ್ರೊ.ಸಿ.ವಿ.ಶಿವರಾಮ ಕೃಷ್ಣ ಇದ್ದರು.