ಮೈಸೂರು: ಶಾಸ್ತ್ರೀಯ ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಾಗಿದೆ ಎಂದು ವ್ಯಾಸರಾಜ ಮಠದ(ಸೋಸಲೆ) ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಹೇಳಿದರು.
ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ವತಿಯಿಂದ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಗಾನಸಿರಿ ವೇದಾಂತ ಲಹರಿ ಭಾಗ-12 ಕಾರ್ಯಕ್ರಮ ಮತ್ತು ರುಗ್ಮಿಣೀಶ ವಿಜಯ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಅಧ್ಯಯನ ಮಾಡುವವರ ಸಂಖ್ಯೆ ಲಕ್ಷಾಂತರ ಇದೆ. ಆದರೆ, ಧಾರ್ಮಿಕ ವಿಷಯಗಳನ್ನು ಶಾಸ್ತ್ರೀಯ ಅಧ್ಯಯನ ಮಾಡುವವರ ಸಂಖ್ಯೆ ಕೇವಲ ಅತ್ಯಲ್ಪ. ಜ್ಞಾನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಸಮಾಜದ ಮುಖ್ಯ ಕರ್ತವ್ಯ. ಇದಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕಿದೆ ಎಂದರು.
ಈಗಿನ ಕಾಲಘಟ್ಟದಲ್ಲಿ ಜ್ಞಾನ ಪರಂಪರೆ ಕಳೆಗುಂದಿದೆ. ಹಿಂದೆ ಶಾಸ್ತ್ರೀಯ ಅಧ್ಯಯನಕ್ಕೆ ಅನುಕೂಲ ಮತ್ತು ಅನನುಕೂಲಗಳೆರಡೂ ಇದ್ದವು. ಆದರೆ, ಪ್ರತಿಬಂಧಕಗಳು ಇರಲಿಲ್ಲ. ಅಧ್ಯಯನಕ್ಕೆ ಪೂರಕ ವಾತಾವರಣವೂ ಇತ್ತು. ಈಗಿಲ್ಲ. ಇಡೀ ವಾತಾವರಣ ಕಲುಷಿತಗೊಂಡಿದೆ. ನಾನಾ ಆಕರ್ಷಣೆಗಳು ಮನಸನ್ನು ಕದಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿದ್ಯಾಭ್ಯಾಸಕ್ಕೆ ಮೊಬೈಲ್ ಹಾವಳಿ ಮಾರಕವಾಗಿದೆ. ಇದರಿಂದ ಅಧ್ಯಯನ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಸ್ತ್ರೀಯ ಅಧ್ಯಯನಕ್ಕೆ ಬರುವವರ ಸಂಖ್ಯೆ ಇನ್ನೂ ಕಡಿಮೆಯಾಗಿದ್ದು, ಇದನ್ನು ಕಲಿಯಲು ಮನಸು ಮಾಡಿ, ಇದರಲ್ಲಿ ಪೂರ್ಣ ಯಶಸ್ಸು ಗಳಿಸುವವರ ಸಂಖ್ಯೆ ಅತಿ ವಿರಳ ಎಂದು ಬೇಸರ ವ್ಯಕ್ತಪಡಿಸಿದರು.
ಈಗಿನ ಕಾಲದ ಪ್ರಭಾವದಲ್ಲಿ ಶಾಸ್ತ್ರೀಯ ಅಧ್ಯಯನದೊಂದಿಗೆ ಲೌಕಿಕ ವಿದ್ಯಾಭ್ಯಾಸವನ್ನೂ ಒಟ್ಟಿಗೆ ಮಾಡಿಕೊಂಡು ಹೋಗಬಹುದು. ಆಸಕ್ತಿ ಇರುವ ಮಕ್ಕಳನ್ನು ಪಾಲಕರು ಮಠದ ಗುರುಕುಲಕ್ಕೆ ಕಳುಹಿಸಿಕೊಡಬೇಕು ಎಂದು ಕೋರಿದರು.
ಮೈಸೂರಿನ ಗುರುಕುಲದಲ್ಲಿ ಈಗ 50 ವಿದ್ಯಾರ್ಥಿಗಳಿದ್ದಾರೆ. ವರ್ಷಕ್ಕೆ 5-6 ಮಕ್ಕಳು ಬಂದರೇ ಅದುವೇ ಹೆಚ್ಚು. ಆಸಕ್ತಿ ಇರುವ ಮಕ್ಕಳನ್ನು ಸೇರಿಸಬೇಕು ಎಂದು ಪಾಲಕರಿಗೆ ತಿಳಿಸಿದರು.
ಸುಧಾಮಂಗಳ ಪೂರೈಸಿದ ಯುವ ವಿದ್ವಾಂಸರಾದ ಪ್ರಣವಾಚಾರ್ಯ, ಸುಘೋಷಾಚಾರ್ಯ, ಎಚ್.ಎನ್.ಸೌಮಿತ್ರಿ, ಶ್ರೀಶ ಅಯಾಚಿತ ಅವರನ್ನು ಸನ್ಮಾನಿಸಲಾಯಿತು. ಎನ್.ಧಾನ್ಯಾ, ಎಂ.ಎಸ್.ಕೀರ್ತನಾ, ಎಸ್.ಹಂಸಣಿ, ನಯನಾ ನಾಗರಾಜ್ ಅವರು ಗಾಯನವನ್ನು ಪ್ರಸ್ತುತ ಪಡಿಸಿದರು.