ತುಮಕೂರು: ಬರೋಬ್ಬರಿ 66 ಇಲಾಖೆಗಳು ನೀಡಿದ್ದ ತೆಮಾಸಿಕ ವರದಿಯನ್ನು 30 ನಿಮಿಷದಲ್ಲಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಕಾರ್ಯವೈಖರಿ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿತು.
ಜಿಪಂ ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ 11.30ಕ್ಕೆ ಆರಂಭವಾದ 2021&22ನೇ ಸಾಲಿನ 4ನೇ ತೆಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯಾವುದೇ ಇಲಾಖೆಗಳ ಬಗ್ಗೆ ಚರ್ಚೆ ನಡೆಯದ ಸಭೆ ನಾಮ್ಕೇವಾಸ್ತೆ ಎನಿಸಿತು.
ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ 2022ರ ಮಾ.3ರಂದು ನಡೆದಿದ್ದ ಕೆಡಿಪಿ ಸಭೆಯ ನಡಾವಳಿಗಳ ಅನುಪಾಲನಾ ವರದಿಯ ಬಗ್ಗೆ ಚರ್ಚಿಸಲಾಯಿತು. 1.45ಕ್ಕೆ ಊಟಕ್ಕೆ ಬಿಡುವು ಕೊಟ್ಟು 2.15ಕ್ಕೆ ಮತ್ತೆ ಆರಂಭವಾದ ಸಭೆಯಲ್ಲಿ ಒಂದೆರಡು ಇಲಾಖೆಗಳ ಬಗ್ಗೆ ಶಾಸಕಷ್ಟೇ 30 ನಿಮಿಷ ಸಭೆ ನಡೆಸಿ, ಮುಕ್ತಾಯವಾಗಿದ್ದು ಆಶ್ಚರ್ಯ ಮೂಡಿಸಿತು.
ಸಭೆಯ ಆರಂಭದಲ್ಲಿಯೇ ಮಾತಿಗಿಳಿದ ಕಾಂಗ್ರೆಸ್ ಶಾಸಕ ಡಾ.ಎಚ್.ಡಿ.ರಂಗನಾಥ್, ರಾಗಿ ಖರೀದಿಯಲ್ಲಿ ರೈತರಿಗೆ ಮೋಸವಾಗುತ್ತಿದೆ, ಸಣ್ಣ ಹಾಗೂ ದೊಡ್ಡ ರೈತರ ಹೆಸರಿನಲ್ಲಿ ವಿಭಾಗ ಮಾಡಿದ್ದು ಸಾಕಷ್ಟು ರೈತರಿಗೆ ಅನ್ಯಾಯವಾಗಿದೆ ಎಂದು ಗಮನ ಸೆಳೆದರು.
ಜೂ.30ರವರೆಗೆ ಜಿಲ್ಲೆಯಲ್ಲಿ ರಾಗಿ ಖರೀದಿ ನಡೆಯಲಿದ್ದು, ಆ ನಂತರ ದೊಡ್ಡ ರೈತರಿಂದಲೂ ರಾಗಿ ಖರೀದಿ ಮಾಡುವ ಬಗ್ಗೆ ಚಿಂತನೆ ಮಾಡೋಣ ಎಂದು ಸಚಿವರು ಚರ್ಚೆಗೆ ತೆರೆ ಎಳೆದರು.
ಕುಣಿಗಲ್ ತಾಲೂಕು ಬಿಳಿ ದೇವಾಲಯ ಗ್ರಾಪಂ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಟಕ ಆರಂಭಿಸಲು ಒತ್ತುವರಿಯಾದ ಜಾಗ ಬಿಡಿಸಿಕೊಡುತ್ತಿಲ್ಲ, ಪೊಲೀಸಿನವರು ಬಿಜೆಪಿ ಮುಖಂಡರ ಮಾತನ್ನಷ್ಟೇ ಕೇಳುತ್ತಾರೆ ಎಂದು ಅಳಲು ತೋಡಿಕೊಂಡರು. ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸಚಿವರು ನೀಡಿದರು.
ಗ್ರಾಪಂ ಪಿಡಿಒಗಳು, ತಾಪಂ ಇಒಗಳು ಮನೆ, ಶೌಚಗೃಹ ನಿರ್ಮಾಣ ಕಾಮಗಾರಿಯಲ್ಲೂ ಲಂಚಕ್ಕೆ ಬೇಡಿಕೆಯಿಡುವ ಕಾರಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದು ಸಭೆಯಲ್ಲಿ ಬಿಜೆಪಿ ಶಾಸಕರು ದೂರಿದರು.
ಬೆಸ್ಕಾಂ, ಕೃಷಿ, ಬಿಸಿಎಂ, ಸಮಾಜ ಕಲ್ಯಾಣ, ಭೂಸ್ವಾಧಿನ, ಗ್ರಾಮೀಣ ಕುಡಿಯುವ ನೀರು, ಶಿಕ್ಷಣ ಸೇರಿ ಬೆರಳೆಣಿಕೆಯಷ್ಟು ಇಲಾಖೆಗಳಿಂದ ಅನುಪಾಲನಾ ವರದಿ ಪಡೆಯುವಾಗ ಮಾಹಿತಿ ಪಡೆದಿದ್ದು ಬಿಟ್ಟರೇ ಉಳಿದ 60ಕ್ಕೂ ಹೆಚ್ಚು ಇಲಾಖೆ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿ, ಊಟ ಮಾಡಿ ವಾಪಸಾದರು.
ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ಸಿಂಗ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಪೊಲೀಸ್ ಅಧೀಕ್ಷಕ ರಾಹುಲ್ಕುಮಾರ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ.ರಾಜೇಶ್ಗೌಡ, ಚಿದಾನಂದಗೌಡ ಇದ್ದರು.
ನೀರಸವಾಗಿದ್ದ ಸಭೆ: ಈ ಹಿಂದೆ ಜಿಲ್ಲೆಯ ಉಸ್ತುವಾರಿ ಹೊಣೆ ನಿಭಾಯಿಸಿದ್ದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನಡೆಸುತ್ತಿದ್ದ ಕೆಡಿಪಿ ಸಭೆಗೆ ಹೋಲಿಸಿದರೆ ಗೃಹ ಸಚಿವ ಆರಗ ಜ್ಞಾನೇಂದ್ರ ನಡೆಸುತ್ತಿರುವ ಸಭೆ ನೀರಸ ಎನಿಸಿದೆ.
ಸಭೆ ಗಂಭೀರವಾಗಿ ನಡೆಯುವುದಿಲ್ಲ ಎಂಬುದನ್ನು ಅರಿತಿರುವ ಅಧಿಕಾರಿಗಳು ಪೂರ್ವ ತಯಾರಿ ಇಲ್ಲದೆ ಸಭೆಗೆ ಆಗಮಿಸುವುದು ಹಾಗೂ ಸಭೆಯಲ್ಲಿಯೂ ಒಬ್ಬರಿಗೊಬ್ಬರು ಮಾತನಾಡುತ್ತ ಹರಟೆ ಹೊಡೆದು ಎದ್ದು ಹೋಗುವುದು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ದೊಡ್ಡ ಆತಂಕವನ್ನೇ ಸೃಷ್ಟಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಯಲು ಸೀಮೆಯ ಸಮಸ್ಯೆಗಳ ಬಗ್ಗೆ ಅರಿವಿನ ಕೊರತೆ ಹಾಗೂ ಅಧಿಕಾರಿಗಳ ಮೇಲೆ ಹಿಡಿತವಿಲ್ಲದಿರುವುದು ಆಡಳಿತದ ಹಳಿ ತಪ್ಪಿಸಿದೆ.
ಸಭೆಗೆ ಗೈರಾದ ವಿರೋಧ ಪಕ್ಷದ ಶಾಸಕರು!: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜಿಲ್ಲೆಯ ವಿರೋಧ ಪಕ್ಷದ ಶಾಸಕರು ಕೆಡಿಪಿ ಸಭೆಗೆ ಗೈರಾಗುತ್ತಿರುವುದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಭೆಯ ಶಾಸ ಮುಗಿಸುವುದು ಸುಲಭವಾಗಿದೆ.
ಹಿರಿಯ ಶಾಸಕ ಡಾ.ಜಿ.ಪರಮೇಶ್ವರ, ಎಸ್.ಶ್ರೀನಿವಾಸ್ ಕಳೆದ 4 ವರ್ಷದಲ್ಲಿ ಈವರೆಗೆ ಒಂದು ಸಭೆಗೂ ಆಗಮಿಸದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಬುಧವಾರ ಕೂಡ ಕಾಂಗ್ರೆಸ್ನ ಡಾ.ಎಚ್.ಡಿ.ರಂಗನಾಥ್ ಹೊರತಾಗಿ ಬೇರಾವ ಶಾಸಕರೂ ಸಭೆಗೆ ಆಗಮಿಸಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ದನಿ ಎತ್ತಲಿಲ್ಲ.
ಎಲೆಕ್ಷನ್ ಹತ್ತಿರವಿದೆ, ಸರ್ಕಾರದ ಸ್ಕೀಮ್ ಬೇಡ!: ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ತುರುವೇಕೆರೆ ಶಾಸಕ ಮಸಾಲಾ ಜಯರಾಂ ಸರ್ಕಾರಿ ಕಾರ್ಯಕ್ರಮಗಳೇ ಬೇಡ, ಚುನಾವಣೆ ಹತ್ತಿರವಿದೆ. ಇಬ್ಬರಿಗೆ ಕೊಟ್ಟರೆ ಮತ್ತೊಬ್ಬರು ಸಿಟ್ಟಾಗುತ್ತಾರೆ ಎಂದು ಪದೇಪದೆ ಹೇಳುತ್ತಿದ್ದರು. ಜಲಜೀವನ್ ಮಿಷನ್ ಕಾರ್ಯಕ್ರಮ ಪ್ರಗತಿ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಇಒ, ಪಿಡಿಒಗಳು ಮನೆಹಾಳು ಮಾಡುತ್ತಿದ್ದಾರೆ, ನಮಗೆ ಈ ಸ್ಕೀಮೆ ಬೇಡ ಎಂದರು. ವಸತಿ ಯೋಜನೆಯ ಬಗ್ಗೆ ಚರ್ಚೆಯಲ್ಲಿಯೂ ಹೆಚ್ಚು ಮನೆ ಕೊಡಿ ಎನ್ನುವ ಬದಲಾಗಿ ನಮಗೆ ಮನೆಗಳೂ ಬೇಡ ಎಂದಿದ್ದು ಆಶ್ಚರ್ಯ ಮೂಡಿಸಿತು.
ರಾಜ್ಯದ ಮುಖ್ಯಕಾರ್ಯದರ್ಶಿಗೆ ಮಧ್ಯರಾತ್ರಿ ೋನ್ ಮಾಡಿದರೂ ಪ್ರತಿಕ್ರಿಯಿಸುತ್ತಾರೆ. ಆದರೆ, ಗ್ರಾಮಲೆಕ್ಕಿಗರು, ಪಿಡಿಒಗಳು ಕರೆ ಸ್ವೀಕರಿಸುವುದಿಲ್ಲ. ಜನಪ್ರತಿನಿಧಿಗಳ ಕರೆ ಸ್ವೀಕರಿಸದಿರುವುದು ಅಪರಾಧ, ಕನಿಷ್ಠ ಸ್ಪಂದನೆಯ ಗುಣ ಬೆಳೆಸಿಕೊಳ್ಳಿ. ಮನೆಗೆ, ಆಫೀಸಿಗೆ ಜನರನ್ನು ಕರೆಸಿಕೊಳ್ಳುವ ಕಾಲ ಮುಗಿದಿದೆ, ಅರ್ಥ ಮಾಡಿಕೊಂಡು ಕೆಲಸ ಮಾಡಿ. > ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ