ಮೂಡಿಗೆರೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಭೆ ನಡೆಯಿತು. ಅಧ್ಯಕ್ಷ ಎಚ್.ಜಿ.ಸುರೇಂದ್ರ, ಬಿ.ಬಿ.ನಿಂಗಯ್ಯ, ಬಿ.ಎಸ್.ಜಯರಾಮ್, ಎಂ.ಪಿ.ಮನು, ಡಿ.ಕೆ.ಉದಯ ಶಂಕರ್, ವಿನಯಕುಮಾರ್, ಕೆ.ಟಿ.ಜಗದೀಶ್, ಸಿ.ಕೆ.ಇಬ್ರಾಹಿಂ, ಎ.ಸಿ.ಅಯೂಬ್ ಹಾಜಿ, ಎಂ.ಎಸ್.ಅನಂತ್, ಮರಗುಂದ ಪ್ರಸನ್ನ ಇತರರಿದ್ದರು. 
ಜಿಲ್ಲೆ

ಶಾಸಕಿ ನಯನಾ ಮೋಟಮ್ಮ ವಿರುದ್ಧ ಮತ್ತೆ ಆಕ್ರೋಶ

ಎಸ್.ಎನ್.ರವೀಂದ್ರ

ಮೂಡಿಗೆರೆ: ಶಾಸಕಿ ನಯನಾ ಮೋಟಮ್ಮ ಅವರು ಕೆಲ ದಿನಗಳ ಹಿಂದೆ ಕೇಸರಿ ಶಾಲು ಧರಿಸಿ ಪ್ರಮೋದ್ ಮುತಾಲಿಕ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಬಳಿಕ ಬೂದಿ ಮುಚ್ಚಿದ ಕೆಂಡದಂತಿದ್ದ ಕಾಂಗ್ರೆಸ್ ಮುಖಂಡರ ಆಕ್ರೋಶ ಶನಿವಾರ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ವ್ಯಕ್ತಪಡಿಸಿದರು.

ಹೊಸದಾಗಿ ವಿಧಾನಪರಿಷತ್ತಿಗೆ ನೇಮಕವಾದ ಆರತಿ ಕೃಷ್ಣ ಅವರಿಗೆ ಸನ್ಮಾನ ಏರ್ಪಡಿಸಲು ಬ್ಲಾಕ್ ಕಾಂಗ್ರೆಸ್‌ನಿಂದ ಶನಿವಾರ ಸಭೆ ಆಯೋಜಿಸಿತ್ತು. ಸಭೆಯಲ್ಲಿ 100ಕ್ಕೂ ಹೆಚ್ಚು ಮುಖಂಡರು ಮತ್ತು ಕಾರ್ಯಕರ್ತರು ಸೇರಿದ್ದರು. ಶಾಸಕರೊಂದಿಗೆ ಗುರುತಿಸಿಕೊಂಡ ಕೆಲವರು ಆರಂಭದಲ್ಲಿ ಸಭೆಗೆ ಬಂದಿದ್ದರು. ನಂತರ ಅವರಿಗೆ ಮೊಬೈಲ್ ಕರೆ ಬಂದಾಗ ಸಭೆಯಿಂದ ಹೊರ ಹೋಗಿದ್ದಾರೆ. ಸೇರಿದ್ದ ಕಾರ್ಯಕರ್ತರು ಮತ್ತು ಮುಖಂಡರು ಒಕ್ಕೊರಲಿನಿಂದ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಮುಖಂಡ ಅಶ್ರಫ್ ಆಲ್ದೂರು ಮಾತನಾಡಿ, ಶಾಸಕರು ಪಕ್ಷವನ್ನು ಸಂಘಟಿಸುತ್ತಿಲ್ಲ. ಬಿಜೆಪಿಯನ್ನು ಬಲಪಡಿಸುತ್ತಿದ್ದಾರೆ. ಇಂಥ ಶಾಸಕರ ಅವಶ್ಯಕತೆ ಇಲ್ಲ ಎಂದು ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಮ್ ಮಾತನಾಡಿ, 20 ವರ್ಷದಿಂದ ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿರಲಿಲ್ಲ. ಕಷ್ಟದ ಪರಿಸ್ಥಿತಿಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಈಗ ಪಕ್ಷ ಅಧಿಕಾರಕ್ಕೆ ಬಂದು ಶಾಸಕರಿದ್ದರೂ ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಇದುವರೆಗೂ ಆಲಿಸಲಿಲ್ಲ. ಎಲ್ಲರ ವಿರೋಧ ಕಟ್ಟಿಕೊಂಡು ನಡೆಯುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಯನಾ ಮೋಟಮ್ಮ ಶಾಸಕರಾದ ಬಳಿಕ ಇದುವರೆಗೂ ಬ್ಲಾಕ್ ಕಾಂಗ್ರೆಸ್ ಸಭೆ ಕರೆಯಲು ಅವಕಾಶ ನೀಡಲಿಲ್ಲ. ಶಾಸಕರ ಕಚೇರಿಯಲ್ಲಿ ನಿತ್ಯ ಸಭೆ ನಡೆಯುತ್ತದೆ. ಮತ್ತೇಕೆ ಬ್ಲಾಕ್ ಕಾಂಗ್ರೆಸ್ ಸಭೆ ಕರೆಯುತ್ತೀರಿ, ಅದರ ಅಗತ್ಯವೇನಿದೆ? ಎಂದು ಶಾಸಕರು ಪ್ರಶ್ನಿಸುತ್ತಾರೆ. ನಯನಾ ಮೋಟಮ್ಮ ಅವರಿಗೆ ನಾನು ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಶಾಸಕರ ಧೋರಣೆಯಿಂದಾಗಿ ಪಕ್ಷವನ್ನು ಸಂಘಟಿಸಲು ಸಾಧ್ಯವಾಗುತ್ತಿಲ್ಲ. ಪಕ್ಷವಿದ್ದಲ್ಲಿಗೆ ಶಾಸಕರು ಬರಬೇಕೇ ಹೊರತು ಶಾಸಕರಿದ್ದಲ್ಲಿಗೆ ಪಕ್ಷ ಹೋಗಲು ಸಾಧ್ಯವಿಲ್ಲ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಪಕ್ಷ ಕೇಂದ್ರೀಕೃತ ರಾಜಕಾರಣವನ್ನು ಬಿಟ್ಟು ಶಾಸಕರ ಕೇಂದ್ರೀಕೃತ ರಾಜಕಾರಣ ನಡೆಯುತ್ತಿದೆ. ಎಂಎಲ್ಸಿ ಆರತಿ ಕೃಷ್ಣ ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸೋಣ ಎಂದು ಶಾಸಕರ ಬಳಿ ಹೇಳಿದಾಗ ಬೇಡ ಎಂದಿದ್ದಾರೆ. ನಾನು ಕೂಡ ಒಕ್ಕಲಿಗ. ಪಕ್ಷದ ಅಧ್ಯಕ್ಷರಾಗಿರುವ ನನ್ನನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಕಿಡಿಕಾರಿದರು.

ವಿಧಾನಸಭಾ ಚುನಾವಣೆ ಮುಗಿದ ನಂತರ ಎರಡೂವರೆ ವರ್ಷದಲ್ಲಿ ಬ್ಲಾಕ್ ಕಾಂಗ್ರೆಸ್ ಸಭೆ ನಡೆದಿಲ್ಲ. ಹೀಗಾದರೆ ಪಕ್ಷವನ್ನು ಸಂಘಟಿಸುವುದಾದರೂ ಹೇಗೆ? ಮುಂದೆ ಜಿಪಂ, ತಾಪಂ, ಗ್ರಾಪಂ ಚುನಾವಣೆ ಬರಲಿದೆ. ಹೀಗೇ ಮುಂದುವರಿದರೆ ಚುನಾವಣೆ ಎದುರಿಸುವುದು ಕಷ್ಟಕರವಾಗಲಿದೆ. ಬ್ಲಾಕ್ ಕಾಂಗ್ರೆಸ್ ಸಭೆ ಆಯೋಜಿಸಲು ಸಾಧ್ಯವಾಗದಿದ್ದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಶಾಸಕರು ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಸಭೆ ನಡೆಸಿ ಅಹವಾಲು ಕೇಳುತ್ತಿಲ್ಲ. ಹೀಗಾದರೆ ಕಾಂಗ್ರೆಸ್‌ನಲ್ಲಿ ನಾವು ಇದ್ದು ಏನು ಪ್ರಯೋಜನ? ಶಾಸಕಿ ನಯನಾ ಮೋಟಮ್ಮ ಅವರು ಪ್ರಮೋದ್ ಮುತಾಲಿಕ್ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಎಐಸಿಸಿ, ಕೆಪಿಸಿಸಿ, ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮುಖಂಡ ಎ.ಸಿ.ಅಯೂಬ್ ಹಾಜಿ ತಿಳಿಸಿದರು.

ಅ.28ರಂದು ಎಂಎಲ್ಸಿ ಆರತಿ ಕೃಷ್ಣ ಅವರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಕಾಂಗ್ರೆಸ್ ಸಮಾವೇಶ ಏರ್ಪಡಿಸಲು ಗೊಂದಲದ ನಡುವೆ ನಿರ್ಣಯ ಕೈಗೊಳ್ಳಲಾಯಿತು. ಅಭಿನಂದನಾ ಸಮಾವೇಶಕ್ಕೆ ಸಚಿವರಾದ ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ಜಮೀರ್ ಅಹಮದ್ ಖಾನ್, ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ ಅವರನ್ನು ಆಹ್ವಾನಿಸಲು ಹಾಗೂ ಶಾಸಕಿ ನಯನಾ ಮೋಟಮ್ಮ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಏರ್ಪಡಿಸಲು ನಿರ್ಣಯ ಕೈಗೊಳ್ಳಲಾಯಿತು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಪಿ.ಮನು, ಹಿರಿಯ ಮುಖಂಡರಾದ ಕೆ.ಟಿ.ಜಗದೀಶ್, ಡಿ.ಕೆ.ಉದಯಶಂಕರ್, ವಿನಯಕುಮಾರ್, ಸಿ.ಕೆ.ಇಬ್ರಾಹಿಂ, ಎಂ.ಎಸ್.ಅನಂತ್, ಸಂಪತ್ ಬಿಳಗುಳ, ಮರಗುಂದ ಪ್ರಸನ್ನ, ಇಸಾಕ್ ಭೂತನಕಾಡು, ಸಿ.ಎಚ್.ಅಹಮದ್ ಬಾವ, ಕೆ.ಆರ್.ಮಹೇಶ್, ಮೋಯ್ದಿನ್ ಸೇಟ್, ಈರೇಗೌಡ, ಸುಬ್ರಹ್ಮಣ್ಯ ಚಕ್ರಮಣಿ, ಇಂತು, ಎಂ.ಎಸ್.ಇಬ್ರಾಹಿಂ ಇತರರಿದ್ದರು.