ರಕ್ಷಾ ಬಂಧನ ದಿನದ ಅಂಗವಾಗಿ ಪುರಸಭೆಯ ಪೌರ ಕಾರ್ಮಿಕ ಮಹಿಳೆಯರು ಶಾಸಕ ಎಚ್.ಕೆ.ಸುರೇಶ್ ನಿವಾಸಕ್ಕೆ ತೆರಳಿ ರಾಖಿ ಕಟ್ಟಿ ಶುಭ ಕೋರಿದರು. ಪುರಸಭೆ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್, ನಿವೃತ್ತ ಪ್ರಾಂಶುಪಾಲ ಜಯಣ್ಣಗೌಡ, ಆರೋಗ್ಯ ನಿರೀಕ್ಷಕ ಲೋಹಿತ್, ಮುಖಂಡರಾದ ನಿಂಗರಾಜು, ರೇಣುಕಾನಂದ, ಪೂರ್ಣೇಶ, ಭಾರತೀಗೌಡ ಇದ್ದರು. 
ಜಿಲ್ಲೆ

ಶಾಸಕರಿಗೆ ರಾಖಿ ಕಟ್ಟಿದ ಪೌರಕಾರ್ಮಿಕರು

ಬೇಲೂರು: ರಕ್ಷಾ ಬಂಧನ ದಿನದ ಅಂಗವಾಗಿ ಬೇಲೂರು ಪುರಸಭೆ ಪೌರ ಕಾರ್ಮಿಕ ಮಹಿಳೆಯರು ಬುಧವಾರ ಪಟ್ಟಣದಲ್ಲಿರುವ ಶಾಸಕ ಎಚ್.ಕೆ.ಸುರೇಶ್ ನಿವಾಸಕ್ಕೆ ತೆರಳಿ ರಾಖಿ ಕಟ್ಟುವ ಮೂಲಕ ಶುಭ ಕೋರಿದರು.

ಇದೇ ಸಂದರ್ಭ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಶಾಸಕ ಎಚ್.ಕೆ.ಸುರೇಶ್, ತಮ್ಮ ನಿವಾಸಕ್ಕೆ ಆಗಮಿಸಿ ಶುಭ ಕೋರಿದ ಎಲ್ಲ ಮಹಿಳೆಯರಿಗೂ ಅರಿಶಿಣ- ಕುಂಕುಮ ನೀಡಿ ಗೌರವಿಸಿದರು.

ಶ್ರಾವಣ ಮಾಸದ ಸಾಲು-ಸಾಲು ಹಬ್ಬಗಳಲ್ಲಿ ಭ್ರಾತೃತ್ವ ಹಾಗೂ ಭಾವೈಕ್ಯತೆ ಬೆಸೆಯುತ್ತವೆ. ಸಹೋದರತ್ವವನ್ನು ಸಾರುವ ರಕ್ಷಾಬಂಧನ ಹಬ್ಬವು ಅತ್ಯಂತ ಶ್ರೇಷ್ಠವಾಗಿದೆ ಎಂದು ಶಾಸಕರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ರಕ್ಷಾಬಂಧನ ದಿನವನ್ನು ಭ್ರಾತೃತ್ವ-ಐಕ್ಯತೆ ಹಿತದೃಷ್ಟಿಯಿಂದ ಆಚರಿಸ ಬೇಕೆಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಭಾರತೀಯ ಸಹೋದರಿಯರಿಗೆ ರಕ್ಷಾ ಬಂಧನದ ಅಂಗವಾಗಿ ಅಡುಗೆ ಅನಿಲದ ಬೆಲೆಯನ್ನು 200 ರೂ. ಇಳಿಸುವ ಮೂಲಕ ಉಡುಗೊರೆ ನೀಡಿದ್ದಾರೆ ಎಂದರು.

ಜಾತಿ, ಧರ್ಮ, ವರ್ಗ ಭೇದವಿಲ್ಲದೆ ಆಚರಿಸುವ ರಕ್ಷಾಬಂಧನ ಆಚರಣೆಗಳು ಇನ್ನು ಹೆಚ್ಚಿನ ಮಟ್ಟದಲ್ಲಿ ನಡೆದು ನಾಡಿನಲ್ಲಿ ಸಾಮರಸ್ಯ, ಸೌಹಾರ್ದತೆ, ಭಾವೈಕ್ಯತೆ ಮೂಡಲಿ. ವರುಣ ದೇವನೂ ನಮ್ಮ ಮೇಲೆ ಕೃಪೆ ತೋರಿ ರೈತರ ಬದುಕನ್ನು ಹಸನಾಗಿಸಲಿ ಎಂದರು.

ಪುರಸಭೆ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್, ನಿವೃತ್ತ ಪ್ರಾಂಶುಪಾಲ ಜಯಣ್ಣಗೌಡ, ಆರೋಗ್ಯ ನಿರೀಕ್ಷಕ ಲೋಹಿತ್, ವೀರಶೈವ ರುದ್ರಭೂಮಿ ಟ್ರಸ್ಟ್ ಅಧ್ಯಕ್ಷ ಸಿ.ಎಂ.ನಿಂಗರಾಜು, ಬಿಜೆಪಿ ಮುಖಂಡರಾದ ರೇಣುಕಾನಂದ, ಪೂರ್ಣೇಶ, ಒಕ್ಕಲಿಗ ಮಹಿಳಾ ಸಂಘದ ಅಧ್ಯಕ್ಷೆ ಭಾರತೀಗೌಡ, ಪುರಸಭೆ ಮಾಜಿ ಅಧ್ಯಕ್ಷೆ ಮುದ್ದಮ್ಮ ಇತರರಿದ್ದರು.