ಜಿಲ್ಲೆ

ಶಾಸಕರಿಗೆ ಬಿಸಿ ತುಪ್ಪವಾದ ಜಿಲ್ಲಾ ಕೇಂದ್ರ, ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ

ದೊಡ್ಡಬಳ್ಳಾಪುರ: ಗಣರಾಜ್ಯೋತ್ಸವದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ದೇವನಹಳ್ಳಿ ಜಿಲ್ಲೆ ಎಂದು ಘೋಷಣೆ ಮಾಡಿ ಹಾಗೂ ಜಿಲ್ಲಾಸ್ಪತ್ರೆಯನ್ನು ದೇವನಹಳ್ಳಿಗೆ ನೀಡಿ ಎಂದು ಒತ್ತಾಯಿಸಿದ್ದ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೆ ತಾಪಂನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತೂಬಗರೆ ಹೋಬಳಿ ವ್ಯಾಪ್ತಿಯ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.

ಸಭೆಯ ನಡುವೆ ಶಾಸಕರನ್ನು ಭೇಟಿಯಾದ ಕನ್ನಡಪರ ಸಂಘಟನೆಗಳ ಮುಖಂಡರು, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೆಸರು ಬದಲಾವಣೆ ವಿಷಯ ನಾನು ಹೇಳಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದರೂ, ಜಿಲ್ಲಾ ಕೇಂದ್ರ ಘೋಷಣೆಯಾಗದೆ ಸರ್ಕಾರ ಅನುದಾನ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರವೆಂದು ಘೋಷಿಸಿ ಎಂಬುದೇ ನನ್ನ ಒತ್ತಾಯವಾಗಿದೆಯೇ ಹೊರತು ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲವೆಂದು ಹೆಸರು ಬದಲಿಸಲು ಕೇಳುತ್ತಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.

ಜಿಲ್ಲಾ ಕೇಂದ್ರ ಘೋಷಣೆಗೆ ದೊಡ್ಡಬಳ್ಳಾಪುರ ಸೂಕ್ತವಾಗಿದೆ. ಆದರೆ ರಾಜಕೀಯ ಲಾಭಕ್ಕೆ ದೇವನಹಳ್ಳಿಯನ್ನು ಜಿಲ್ಲೆ ಎಂದು ಘೋಷಿಸಿ ಎಂದು ಒತ್ತಾಯಿಸುವುದು ಶೋಭೆಯಲ್ಲ. ಶಾಸಕರು ಈ ಧೋರಣೆ ಬದಲಿಸಿಕೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡ ಕನ್ನಡ ಪಕ್ಷದ ಸಂಜೀವ್ ನಾಯಕ್ ತಿಳಿಸಿದರು.

ತಹಸೀಲ್ದಾರ್ ಮೋಹನಕುಮಾರಿ, ಇಒ ಶ್ರೀನಾಥ್‌ಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಕರವೇ ಪ್ರವೀಣ್ ಶೆಟ್ಟಿ ಬಣದ ಹಮಾಮ್ ವೆಂಕಟೇಶ್, ಹಿರಿಯ ಹೋರಾಟಗಾರರಾದ ಸತ್ಯನಾರಾಯಣ, ಜೋಗಹಳ್ಳಿ ಅಮ್ಮು, ಸೂರಿ, ವೆಂಕಟೇಶ್, ಎಂ.ಸತೀಶ್, ಕೆ.ಪಿ.ಜಗನ್ನಾಥ್ ಇದ್ದರು.