ಹಾಸನ: ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿದ್ದು, ಶನಿವಾರ ದರ್ಶನ ವ್ಯವಸ್ಥೆಯಲ್ಲಿ ಸಾಕಷ್ಟು ಗೊಂದಲ, ನೂಕುನುಗ್ಗಲು ಉಂಟಾಯಿತು.
ವಾರಾಂತ್ಯ ಮತ್ತು ಸಾಲು ರಜೆಗಳಿರುವುರಿಂದ ಹಾಗೂ ದೇವಿಯ ಸಾರ್ವಜನಿಕ ದರ್ಶನಕ್ಕೆ ಇನ್ನು 3 ದಿನಗಳು ಮಾತ್ರ ಉಳಿದಿರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಆಗಮಿಸುತ್ತಿದ್ದಾರೆ. ಶನಿವಾರ ಅತಿಗಣ್ಯ ಭಕ್ತರ ಸಂಖ್ಯೆಯೂ ಹೆಚ್ಚಿದ್ದರಿಂದ ಸಾಮಾನ್ಯ ಭಕ್ತರ ದರ್ಶನಕ್ಕೆ ಆಗಿಂದಾಗ್ಗೆ ಅಡ್ಡಿ ಉಂಟಾಗುತ್ತಿತ್ತು. ಸಾವಿರ ರೂ. ಮತ್ತು 300 ರೂ. ಟಿಕೆಟ್‌ಗಳ ವಿಶೇಷ ದರ್ಶನದ ಸಾಲುಗಳು ಸಹ ಹನುಮಂತನ ಬಾಲದಂತೆ ಬೆಳೆದಿದ್ದವು. ವಿಶೇಷ ಪಾಸ್‌ಗಳನ್ನು ಪಡೆದಿದ್ದ ಭಕ್ತರ ಸಾಲು ಸಹ ದೊಡ್ಡದಾಗಿತ್ತು.
2 ಲಕ್ಷ ಭಕ್ತರ ಭೇಟಿ, ಕೋಟಿ ರೂ. ಆದಾಯ:
ಹಾಸನಾಂಬೆಯ ಸಾರ್ವಜನಿಕ ದರ್ಶನ ಆರಂಭವಾದ ಅ.14 ರಿಂದ ಇಲ್ಲಿಯವರೆಗೆ ಸುಮಾರು 2 ಲಕ್ಷ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ವಿಶೇಷ ದರ್ಶನದ ಟಿಕೆಟ್‌ಗಳು ಮತ್ತು ಪ್ರಸಾದದ ಲಾಡುಗಳ ಮಾರಾಟದಿಂದ ಅ.21 ರವರೆಗೆ ಒಟ್ಟು 1,00,29,160 ರೂ. ಸಂಗ್ರಹವಾಗಿದೆ. ಅ.21 ರವರೆಗೆ ವಿಶೇಷ ದರ್ಶನದ ಸಾವಿರ ರೂ.ಗಳ 3973 ಟಿಕೆಟ್‌ಗಳು ಮತ್ತು 300 ರೂ.ಗಳ 14580 ಟಿಕೆಟ್‌ಗಳು ಮಾರಾಟ ಆಗಿವೆ. ತಲಾ 60 ರೂ. ಬೆಲೆಯ 28036 ಲಾಡುಗಳ ಮಾರಾಟ ಆಗಿದೆ.
ಗಣ್ಯರ ಭೇಟಿ:
ಶನಿವಾರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ. ಗಿರೀಶ್ ಉಪ್ಪಾರ್, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ, ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಘಾಯಕ್‌ವಾಡ್, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ನಟಿ ತಾರಾ, ಮಾಜಿ ಸಚಿವ ಎಚ್.ಡಿ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಸಿನಿಮಾ ನಟರಾದ ಅನಿರುದ್ಧ, ಧನ್ವೀರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಪೂಜಾರಿ, ನ್ಯಾಯಾಧೀಶರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ರಾಜೇಶ್ವರಿ ಗಾಯಕ್‌ವಾಡ್ ಅವರು, ‘ಇದೇ ಮೊದಲ ಬಾರಿಗೆ ಹಾಸನಾಂಬೆ ದರ್ಶನ ಪಡೆದಿದ್ದು ತುಂಬಿ ಖುಷಿಯಾಗಿದೆ. ಭಾರತ ಮಹಿಳೆಯರ ಕ್ರಿಕೆಟ್ ತಂಡ ಏಷ್ಯಾ ಕಪ್ ಗೆದ್ದಿದ್ದು, ವಿಶ್ವಕಪ್ ಗೆಲ್ಲುವ ಶಕ್ತಿ ನೀಡು’ ಎಂಬುದಾಗಿ ತಾಯಿಯಲ್ಲಿ ಬೇಡಿಕೊಂಡಿದ್ದೇನೆ ಎಂದು ಸುದ್ದಿಗಾರರೊಂದಿಗೆ ತಮ್ಮ ಸಂತಸ ಹಂಚಿಕೊಂಡರು.
ದರ್ಶನಕ್ಕೆ 3 ದಿನಗಳು ಬಾಕಿ:
ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ ಇನ್ನು 3 ದಿನಗಳು ಮಾತ್ರ ಬಾಕಿ ಉಳಿದಿವೆ. ಅ.23, 24 ಮತ್ತು 26 ರಂದು ಮಾತ್ರ ದೇವಿಯ ದರ್ಶನ ಇರುತ್ತದೆ. ಅ.25 ರಂದು ಗ್ರಹಣ ಇರುವುದರಿಂದ ದರ್ಶನ ಅವಕಾಶ ಇಲ್ಲ. ಅ.27 ರಂದು ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿಯ ಬಾಗಿಲು ಮುಚ್ಚಲಿದ್ದು, ಅಂದು ಸಹ ಸಾರ್ವಜನಿಕ ದರ್ಶನ ಇರುವುದಿಲ್ಲ.
ಶಾಸಕರಿಂದ ಸಂಪೂರ್ಣ ನಿಯಂತ್ರಣ:
ಹಾಸನಾಂಬೆ ದರ್ಶನಕ್ಕೆ ಭಕ್ತರು ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿರುವುದರಿಂದ ಗೊಂದಲ ಸೃಷ್ಟಿ ಆಗಬಾರದು ಎಂಬ ಕಾರಣಕ್ಕೆ ಶಾಸಕ ಪ್ರೀತಂಗೌಡ ಸ್ಥಳದಲ್ಲೇ ಇದ್ದು ಇಡೀ ದರ್ಶನ ವ್ಯವಸ್ಥೆಯನ್ನು ನಿಯಂತ್ರಿಸಿದರು.
ಶಾಸಕ ಪ್ರೀತಂಗೌಡ ಅನುಮತಿ ಕೊಟ್ಟವರಿಗೆ ಮಾತ್ರ ಗರ್ಭಗುಡಿ ಒಳಗೆ ಬಿಡಲಾಗುತ್ತಿತ್ತು. ಗರ್ಭಗುಡಿ ಮುಂಭಾಗವೇ ನಿಂತು ಪ್ರೀತಂಗೌಡ ಎಲ್ಲವನ್ನೂ ನಿಯಂತ್ರಣ ಮಾಡುತ್ತಿದ್ದರು. ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅವರನ್ನು ಗರ್ಭಗುಡಿ ಒಳಗೆ ಬಿಡಲು ಸ್ಥಳದಲ್ಲಿದ್ದ ಪೊಲೀಸರು ಶಾಸಕರ ಅನುಮತಿ ಪಡೆದು ಒಳಬಿಟ್ಟರು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರನ್ನು ಗರ್ಭಗುಡಿಗೆ ಕಳುಹಿಸಲು ಸಹ ಪೊಲೀಸರು ಶಾಸಕರ ಅನುಮತಿ ಪಡೆಯಬೇಕಾಯಿತು.
ಅರ್ಚಕರು ಪ್ರಸಾದ ನೀಡಲು ಶಾಸಕರ ಮುಖ ನೋಡುತ್ತಿದ್ದರು, ಅವರು ಗ್ರೀನ್ ಸಿಗ್ನಲ್ ಕೊಟ್ಟರೆ ಮಾತ್ರ ಕುಂಕುಮ, ಪ್ರಸಾದ ನೀಡಲಾಗುತ್ತಿತ್ತು. ಭಕ್ತರು ತಂದಿದ್ದ ಸೀರೆ, ಹೂವನ್ನು ಅರ್ಚಕರು ದೇವರ ಮುಂದಿಟ್ಟು ಪೂಜೆ ಸಲ್ಲಿಸಿ ನಂತರ ಶಾಸಕರ ಕೈಗೆ ಕೊಡುತ್ತಿದ್ದರು. ಶಾಸಕರು ಭಕ್ತರಿಗೆ ಹಸ್ತಾಂತರಿಸುತ್ತಿದ್ದರು.
ಮತ್ತೆ ಮುಖಾಮುಖಿ:
ಜಿದ್ದಾಜಿದ್ದಿ ರಾಜಕೀಯ ನಡೆಸುತ್ತಿರುವ ಶಾಸಕ ಪ್ರೀತಂಗೌಡ ಮತ್ತು ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಸನಾಂಬೆ ಸನ್ನಿಧಿಯಲ್ಲಿ ಶನಿವಾರ ಸಹ ಮುಖಾಮುಖಿ ಆದರು. ಎಚ್.ಡಿ. ರೇವಣ್ಣ ಅವರು ಹೈಕೋರ್ಟ್ ವಕೀಲರ ಕುಟುಂಬವೊಂದನ್ನು ದೇವಿ ದರ್ಶನಕ್ಕೆ ಕರೆತಂದರು. ಈ ವೇಳೆ ಗರ್ಭಗುಡಿ ಬಳಿ ನಿಂತಿದ್ದ ಶಾಸಕ ಪ್ರೀತಂಗೌಡ ನಿರ್ಭಾವುಕರಾಗಿ ಸುಮ್ಮನೆ ನಿಂತಿದ್ದರು. ಅವರ ಮುಖದಲ್ಲಿ ಒಂದು ಸಣ್ಣ ಗೆರೆಯೂ ಮೂಡಲಿಲ್ಲ. ರೇವಣ್ಣ ಅವರ ಹಿಂದೆ ಬಂದ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರಿಗೆ ಪ್ರೀತಂಗೌಡ ಕೈಮುಗಿದು ಮುಗುಳ್ನಕ್ಕರು.
ಇತ್ತ ರೇವಣ್ಣ ವಕೀಲರನ್ನು ಗರ್ಭಗುಡಿಗೆ ಕರೆದೊಯ್ದು ಪೂಜೆ ಸಲ್ಲಿಸಿದರು. ಸುಮಾರು ಹದಿನೈದು ನಿಮಿಷಗಳ ಕಾಲ ಪೂಜೆ ಸಲ್ಲಿಸಿ ರೇವಣ್ಣ ಹೊರಬಂದರು. ಗರ್ಭಗುಡಿಯ ಎಡಭಾಗದಲ್ಲಿ ಶಾಸಕ ಪ್ರೀತಂಗೌಡ ನಿಂತಿದ್ದರಿಂದ ರೇವಣ್ಣ ಬಲಭಾಗದಿಂದ ನಿರ್ಗಮಿಸಿದರು. ಶುಕ್ರವಾರ ಸಹ ರೇವಣ್ಣ ಮತ್ತು ಪ್ರೀತಂಗೌಡ ಮುಖಾಮುಖಿ ಆಗಿದ್ದರು. ರೇವಣ್ಣ ಬರುವುದನ್ನು ಕಂಡು ಶಾಸಕ ಪ್ರೀತಂಗೌಡರು ಗರ್ಭಗುಡಿಗೆ ತೆರಳಿ ಸುಮಾರು 15 ನಿಮಿಷಗಳ ಕಾಲ ಪೂಜೆ ಸಲ್ಲಿಸಿದ್ದರು. ಅವರು ಹೊರ ಬರುವವರೆಗೂ ರೇವಣ್ಣ ಹೊರಗೆ ಕಾಯುತ್ತಾ ನಿಂತಿದ್ದರು.