ಸಿದ್ದಾಪುರ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಭಾನುವಾರ ವಿರಾಜಪೇಟೆ ತಾಲೂಕು ಶಾಸಕ ಎ.ಎಸ್.ಪೊನ್ನಣ್ಣ ಅವರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಮುಖ್ಯ ರಸ್ತೆಗೆ ಈಗಾಗಲೇ ಟೆಂಡರ್ ಆಗಿದ್ದು, ಕಾಮಗಾರಿ ವಿಳಂಬವಾಗಿರುವುದಕ್ಕೆ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಮಳೆಯ ಸಂದರ್ಭದಲ್ಲಿ ಡಾಂಬರೀಕರಣ ಕಾಮಗಾರಿ ಅಸಾಧ್ಯವಾಗಿರುವುದರಿಂದ ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗದಂತೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಗುತ್ತಿಗೆದಾರರು ಸ್ಥಳದಲ್ಲಿ ಇಲ್ಲದಿರುವುದನ್ನು ಗಮನಿಸಿ ಕೂಡಲೇ ಅವರನ್ನು ಕರೆಸಿದ ಶಾಸಕರು, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ವಿಳಂಬವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, 15 ದಿನಗಳ ಒಳಗಾಗಿ ವಿದ್ಯುತ್ ಕಂಬಗಳು ಹಾಗೂ ಮೋರಿಯನ್ನು ದುರಸ್ತಿಪಡಿಸುವುದರೊಂದಿಗೆ, ರಸ್ತೆಯ ಡಾಂಬರೀಕರಣ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ತಾಕೀತು ಮಾಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರತಿಷ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರು ಹಾಜರಿದ್ದರು.