ಹಾಸನ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ತಾಲೂಕಿನ ಕಾರ್ಲೆ ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ನರೇಗಾ ನಡೆ ರೈತರ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ದೊರೆಯುವ ವೈಯಕ್ತಿಕ ಕೊಟ್ಟಿಗೆ, ಬದು, ತೆಂಗು, ಬಾಳೆ, ಅಡಿಕೆ ಸೇರಿದಂತೆ ಇನ್ನಿತರ ಪ್ರಯೋಜನಗಳನ್ನು ಬಳಕೆ ಮಾಡಿಕೊಳ್ಳುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.
ಇದೇ ವೇಳೆ ಶಾಸಕರು ನರೇಗಾ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಟ್ಟಿಗೆ, ತೆಂಗು, ಅಡಿಕೆ, ಬಾಳೆ ಸೇರಿದಂತೆ ಇನ್ನಿತರ ವೈಯಕ್ತಿಕ ಕಾರ್ಯದೇಶ ಪ್ರತಿಯನ್ನು ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ ಒಂದು ವರ್ಷದಲ್ಲಿ 100 ದಿವಸಗಳು ಕೆಲಸ ನೀಡಲಿದ್ದು, ಹಾಗೂ ಮಹಿಳೆ ಮತ್ತು ಪುರುಷರಿಗೆ ಸಮಾನವಾಗಿ ದಿನಕ್ಕೆ 349 ರೂಪಾಯಿಗಳ ದಿನಗೂಲಿ ನೀಡಲಾಗುವುದು ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಮಾಹಿತಿ ನೀಡಿದರು.
ನರೇಗಾ ಯೋಜನೆಯಡಿ ಜಾನುವಾರು ಕೊಟ್ಟಿಗೆ, ಕುರಿ ಶೆಡ್, ತೆಂಗು, ಅಡಿಕೆ, ಬಾಳೆ ಸೇರಿದಂತೆ ನರೇಗಾ ಯೋಜನೆಯಡಿ ವೈಯಕ್ತಿಕವಾಗಿ ದೊರೆಯುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಅದರ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಧೃಡರಾಗುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವ, ಉಪಾಧ್ಯಕ್ಷೆ ನಂದಿನಿ ಕುಮಾರಿ, ಕಾರ್ಲೆ ಗ್ರಾಮ ಪಂಚಾಯತಿ ಸದಸ್ಯರು, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್, ಕಾರ್ಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೀಮಾ ತರನಂ, ದ್ವಿತೀಯ ದರ್ಜೆ ಸಹಾಯಕ ರಾಮಕೃಷ್ಣ, ತಾಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕ ರಾಜೇಶ್ ಹಾಗೂ ಮತ್ತಿತರರು ಹಾಜರಿದ್ದರು.