ಜಿಲ್ಲೆ

ಶಾಸಕರಾಗಿ ನೀವೇನು ಮಾಡಿದ್ರಿ?

ಶಿವಮೊಗ್ಗ: ಕೆ.ಎಸ್.ಈಶ್ವರಪ್ಪ ಅವರನ್ನು ನಿಷ್ಕ್ರಿಯ ಸಚಿವ ಎಂದು ಟೀಕೆ ಮಾಡಿರುವ ಕೆ.ಬಿ. ಪ್ರಸನ್ನಕುಮಾರ್ ಅವರೇ, ನೀವು ಶಾಸಕರಾಗಿದ್ದಾಗ ಎಷ್ಟು ಸಕ್ರಿಯರಾಗಿದ್ರಿ? ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರನ್ನು ಪ್ರಶ್ನಿಸಿದರು.

ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿರುವ ಕೆ.ಬಿ. ಪ್ರಸನ್ನಕುಮಾರ್ ಅವರನ್ನು ಸುದ್ದಿಗೋಷ್ಠಿಯಲ್ಲಿ ತರಾಟೆ ತೆಗೆದುಕೊಂಡ ದತ್ತಾತ್ರಿ, ಶಾಸಕರಾಗಿದ್ದಾಗ ಅನುದಾನ ತರಲು ವಿಫಲರಾಗಿದ್ದ ಪ್ರಸನ್ನಕುಮಾರ್ ಇದೀಗ ಸಚಿವ ಈಶ್ವರಪ್ಪ ಅವರನ್ನು ಟೀಕಿಸುವ ಮೂಲಕ ನಗರದಲ್ಲಿ ತಮ್ಮ ಅಸ್ತಿತ್ವ ಸಾಬೀತಿಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗೇಲಿ ಮಾಡಿದರು.

ಸದಾ ಕ್ರಿಯಾಶೀಲರಾಗಿರುವ ಸಚಿವರ ರಾಜೀನಾಮೆ ಕೇಳಿರುವುದು ಅವರ ರಾಜಕೀಯ ಅಪ್ರಬುದ್ಧತೆಗೆ ಸಾಕ್ಷಿ ಎಂದು ಕುಟುಕಿದರು.

ರೌಡಿಸಂ, ಕೊಲೆ, ಸುಲಿಗೆ, ದರೋಡೆ ಪ್ರಕರಣಗಳನ್ನು ನಿಯಂತ್ರಿಸಲು ಸಚಿವರು ಪೊಲೀಸರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆಯೇ ವಿನಃ ಎಸ್ಪಿ ಕೆ.ಎಂ.ಶಾಂತರಾಜು ಅವರನ್ನು ವರ್ಗಾವಣೆ ಮಾಡುವ ಉದ್ದೇಶವಿಲ್ಲ. ಪಟ್ಟಿ ಮಾಡಿ ವರ್ಗಾವಣೆ ಮಾಡುವ ಚಾಳಿ ನೀವು ಶಾಸಕರಾಗಿದ್ದಾಗ ಇತ್ತು ಎಂದು ತಿರುಗೇಟು ನೀಡಿದರು.

ಶಾಸಕರಾದ ಬಳಿಕ ನೀರಾವರಿ ಇಲಾಖೆಗೆ 24 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಗೆ 5.34 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 12 ಕೋಟಿ ರೂ., ಎಸ್​ಎಫ್​ಸಿ ಅನುದಾನ 24 ಕೋಟಿ ರೂ., ಲೋಕೋಪಯೋಗಿ ಇಲಾಖೆ ಮೂಲಕ 10 ಕೋಟಿ ರೂ. ಹಾಗೂ 2ನೇ ಬಾರಿ ಎಸ್​ಎಫ್​ಸಿ 10 ಕೋಟಿ ರೂ. ಅನುದಾನ ತಂದು ಭೂಮಿ ಪೂಜೆ, ಗುದ್ದಲಿ ಪೂಜೆ ಮಾಡಿದ್ದಾರೆ ಎಂದರು.

ಸ್ಮಾರ್ಟ್​ಸಿಟಿ ಯೋಜನೆಯಲ್ಲಿ 307 ಕೋಟಿ ರೂ. ಕೆಲಸ ನಡೆಯುತ್ತಿದೆ. ರಾಜ್ಯ ಸರ್ಕಾರದಿಂದ ಅನುದಾನ ತರುವ ಗಡಸುತನ ಈಶ್ವರಪ್ಪ ಅವರಿಗಿದೆ. ಆದರೆ ಪ್ರಸನ್ನಕುಮಾರ್ 5 ವರ್ಷದಲ್ಲಿ ಶಾಸಕರ ಅನುದಾನ ಬಿಟ್ಟು ನಯಾಪೈಸೆ ಅನುದಾನವನ್ನು ಜಿಲ್ಲೆಗೆ ತರಲಿಲ್ಲ ಎಂದು ದೂರಿದರು.

ಸಿಮ್ಸ್​ನ ಹಿಂದಿನ ನಿರ್ದೇಶಕ ಡಾ. ಬಿ.ಜಿ.ಲೇಪಾಕ್ಷಿ ಅವರು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಮೆಗ್ಗಾನ್ ವ್ಯವಸ್ಥೆ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಮೆಗ್ಗಾನ್​ಗೆ ಕಾಲಿಡಲ್ಲ ಎಂದಿದ್ದರು. ಆದರೆ ಆ ಬಳಿಕ ಕರೊನಾ ನಿಯಂತ್ರಣ ಹಾಗೂ ಮೆಗ್ಗಾನ್ ಆಸ್ಪತ್ರೆ ಅಭಿವೃದ್ಧಿ ಸಂಬಂಧ 56 ಸಭೆ ನಡೆಸಿದ್ದಾರೆ ಎಂದರು.

ಬಿಜೆಪಿ ನಗರ ಅಧ್ಯಕ್ಷ ಜಗದೀಶ್, ಎನ್.ಜೆ.ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಮೋಹನ್ ರೆಡ್ಡಿ, ಬಳ್ಳೆಕೆರೆ ಸಂತೋಷ್, ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.