ಜಿಲ್ಲೆ

ಶಾಸಕರ ಸಹಕಾರಕ್ಕೆ ಟಿಬೆಟಿಯನ್ನರ ಮೆಚ್ಚುಗೆ

ಹನೂರು: ಹಿಮಾಚಲ ಪ್ರದೇಶದ ಸಂಸದರಾದ ದವೂಸ್ ಸಿಂಗ್ ಹಾಗೂ ಇಷಡೋಲಮ್ ಅವರು ಭಾನುವಾರ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಅವರನ್ನು ಸನ್ಮಾನಿಸಿದರು.
ಹನೂರು ತಾಲೂಕಿನ ಒಡೆಯರಪಾಳ್ಯ ಟಿಬೆಟಿಯನ್ ಕಾಲನಿಗೆ ಶನಿವಾರ ಭೇಟಿ ನೀಡಿದ್ದ ಸಂಸದರು ಅಲ್ಲಿನ ಕಾರ್ಯಚಟುವಟಿಕೆಗಳು, ಟಿಬೆಟಿಯನ್ನರ ಜೀವನಶೈಲಿ, ದೊರಕಿರುವ ಮೂಲಸೌಕರ್ಯಗಳು ಹಾಗೂ ವಸ್ತುಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ಟಿಬೆಟಿಯನ್ನರೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಶಾಸಕ ಆರ್.ನರೇಂದ್ರ ಅವರ ಸಹಕಾರಕ್ಕೆ ಟಿಬೆಟಿಯನ್ನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಕೊಳ್ಳೇಗಾಲದಲ್ಲಿರುವ ಶಾಸಕ ಆರ್.ನರೇಂದ್ರ ಅವರ ನಿವಾಸಕ್ಕೆ ತೆರಳಿ ಅವರನ್ನು ಅಭಿನಂದಿಸಿದರು.
ಈ ವೇಳೆ ಶಾಸಕರು ಮಾತನಾಡಿ, ಕಳೆದ 40 ವರ್ಷದಿಂದಲೂ ಒಡೆಯರಪಾಳ್ಯ ಬಳಿ ನೆಲೆಸಿರುವ ಟಿಬೆಟಿಯನ್ನರು ಜನರೊಂದಿಗೆ ಸ್ನೇಹ ಸೌಹಾರ್ದತೆಯಿಂದ ವಾಸಿಸುತ್ತಿದ್ದು, ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇವರ ಯೋಗಕ್ಷೇಮವನ್ನು ವಿಚಾರಿಸಲು ಆಗಮಿಸಿರುವುದು ಸಂತಸದ ವಿಷಯ. ಈ ಹಿಂದೆ ಟಿಬೆಟಿಯನ್ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ನಿಮಿಸಿಕೊಡುವಂತೆ ಮನವಿ ಮಾಡಿದ್ದರು. ಈ ದಿಸೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಮೊದಲ ಕಂತಿನಲ್ಲಿ ಬಿಡುಗಡೆಯಾದ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆಯಲ್ಲದೇ ಇದೀಗ ಮತ್ತೆ 5 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೂ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಟಿಬೆಟಿಯನ್ ಸೆಟಲ್‌ಮೆಂಟ್ ಅಧಿಕಾರಿ ಗೆಲಕ್, ಮುಖಂಡರಾದ ಸವಘ್ ಸೋನಮ್, ಲೋಬೋಸ್ಕ್, ಷೇಧರ್ ಹಾಗೂ ಇನ್ನಿತರರು ಇದ್ದರು.